ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿಯು ಜಗತ್ತಿನಾದ್ಯಂತ ಮಹಿಳೆಯರಿಗೆ ತಟ್ಟಿದೆ ಮತ್ತು ಅಂತರ್ಗತ, ಸಮೃದ್ಧ ಆರ್ಥಿಕತೆ ಮತ್ತು ಸಮಾಜಗಳನ್ನು ನಿರ್ಮಿಸಲು ಹೊಸ ಅಡೆತಡೆಗಳನ್ನು ಹುಟ್ಟುಹಾಕಿರುವುದು ನಿಜವೆಂಬುದು ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಜಾಗತಿಕ ಲಿಂಗ ಅಸಮಾನತೆ ವರದಿ 2021ರಲ್ಲಿ ಸಾಬೀತಾಗಿದೆ.
ಲಾಕ್ ಡೌನ್ ನಿಂದ ಮಹಿಳೆಯರಿಗೆ ಬಹಳಷ್ಟು ಹೊಡೆತ ಬಿದ್ದಿದೆ ಎಂದು ಹೇಳುವ ವರದಿ, ಮನೆಯಲ್ಲಿ ಆರೈಕೆಯಂತಹ ಹೆಚ್ಚುವರಿ ಕೆಲಸದೊಂದಿಗೆ ಬಿಕ್ಕಟ್ಟುಗಳು, ಆರ್ಥಿಕತೆಗಳು ಮತ್ತು ಕೈಗಾರಿಕೆಗಳಲ್ಲಿ ಲಿಂಗ ಸಮಾನತೆ ಪ್ರಗತಿಯನ್ನು ಸ್ಥಗಿತಗೊಳಿಸಿವೆ ಎಂದು ಡಬ್ಲ್ಯೂಇಎಫ್ ನ ಹೊಸ ಆರ್ಥಿಕತೆ ಮತ್ತು ಸಮಾಜ ಕೇಂದ್ರದ ಮುಖ್ಯಸ್ಥೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಾಡಿಯಾ ಜಾಹಿದಿ ಬರೆಯುತ್ತಾರೆ.
ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗ ಅಸಮಾನತೆ ವರದಿಯ 15 ನೇ ಆವೃತ್ತಿಯು 156 ದೇಶಗಳಲ್ಲಿನ 'ಲಿಂಗ ಸಮಾನತೆಯ ಸೂಚ್ಯಂಕವಾಗಿದೆ. ಇದು ನಾಲ್ಕು ವಿಶಾಲ ಮಾನದಂಡಗಳ ಮೇಲಿನ ಶ್ರೇಣೀಕೃತ ಮೌಲ್ಯಮಾಪನಗಳನ್ನು ಆಧರಿಸಿದೆ - ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಈ ಪ್ರತಿಯೊಂದು ದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದಲ್ಲಿ ಅವರ ಪಾತ್ರವನ್ನು ಪರಿಗಣಿಸುತ್ತದೆ.
ವರದಿ ಪ್ರಕಾರ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ನಂತರ ದಕ್ಷಿಣ ಏಷ್ಯಾ ಸೂಚ್ಯಂಕದಲ್ಲಿ ಎರಡನೇ ಕಳಪೆ ಪ್ರದರ್ಶನ ತೋರಿದೆ. ಒಟ್ಟಾರೇ ಶೇ. 62.3 ರಷ್ಟು ಲಿಂಗ ಅಸಮಾನತೆ ಇದೆ. ಇತ್ತೀಚಿನ ದಿನಗಳಲ್ಲಿ ಪ್ರಗತಿ ತುಂಬಾ ನಿಧಾನವಾಗಿದೆ, ಮತ್ತು ಈ ವರ್ಷ ಅದು ನಿಜವಾಗಿ ವ್ಯತಿರಿಕ್ತವಾಗಿದೆ. ಈ ಪ್ರದೇಶದಲ್ಲಿ ಲಿಂಗ ಅಸಮಾನತೆ ಅಂತ್ಯಗೊಳಿಸಲು ಅಂದಾಜು 195.4 ವರ್ಷಗಳೇ ಬೇಕಾಗಲಿದೆ ಎಂದು ವರದಿ ಎಚ್ಚರಿಕೆ ನೀಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಲಿಂಗ ಅಸಮಾನತೆ ಕೊನೆಗೊಳಿಸಲು 135.6 ವರ್ಷಗಳನ್ನು ತೆಗೆದುಕೊಳ್ಳಲಿದೆ ಎಂದು ವಿಶ್ವ ಆರ್ಥಿಕ ವೇದಿಕೆ, ಜಾಗತಿಕ ಲಿಂಗ ಅಸಮಾನತೆ ವರದಿ 2021ರಲ್ಲಿ ಹೇಳಿದೆ. ಈ ವಲಯದಲ್ಲಿ ಭಾರತದ್ದು ಮೂರನೇ ಕಳಪೆ ಪ್ರದರ್ಶನವಾಗಿದೆ. ಇಲ್ಲಿ ಲಿಂಗ ಅಸಮಾನತೆ ಶೇ. 62.5 ರಷ್ಟಿದೆ. ದೊಡ್ಡ ಜನಸಂಖ್ಯೆಯ ಕಾರಣ, ಭಾರತದ ಕಾರ್ಯಕ್ಷಮತೆಯು ಈ ಪ್ರದೇಶದ ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. 0.65 ಶತಕೋಟಿ ಮಹಿಳೆಯರಿಗೆ ನೆಲೆಯಾಗಿರುವ ಭಾರತದಲ್ಲಿ ವರ್ಷದ ಹಿಂದೆ ಶೇ. 66.8 ರಷ್ಟಿದ್ದ ಲಿಂಗ ಅಸಮಾನತೆ ಈ ವರ್ಷ ಶೇ.62.5 ರಷ್ಟಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಕೇವಲ ಶೇ.22.3 ರಷ್ಟು ಮಹಿಳೆಯರು ಮಾತ್ರ ಲೇಬರ್ ಮಾರುಕಟ್ಟೆಯಲ್ಲಿ ಸಕ್ರೀಯರಾಗಿದ್ದಾರೆ. 29.2 ರಷ್ಟು ಮಹಿಳೆಯರು ತಾಂತ್ರಿಕ ಪಾತ್ರ ನಿರ್ವಹಿಸುತ್ತಿದ್ದರೆ ಶೇ. 14.6 ರಷ್ಟು ಮಹಿಳೆಯರು ಸಿನಿಯರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾರತೀಯ ಮಹಿಳೆಯರ ಸರಾಸರಿ ಆದಾಯ, ಭಾರತೀಯ ಪುರುಷರ ಸರಾಸರಿಗಿಂತ ಶೇಕಡಾ 20.7 ಕ್ಕಿಂತ ಕಡಿಮೆಯಿದೆ ಮತ್ತು ಮಹಿಳಾ ಮಂತ್ರಿಗಳ ಪಾಲು ಶೇಕಡಾ 23.1 ರಿಂದ 9.1 ಕ್ಕೆ ಇಳಿದಿದೆ ಎಂದು ಡಬ್ಲ್ಯುಇಎಫ್ ಇಂಡಿಯಾ ಸಂಶೋಧನೆಗಳು ತಿಳಿಸಿವೆ. ಪ್ರಸ್ತುತ ಪ್ರಗತಿಯ ದರದಲ್ಲಿ, ರಾಜಕೀಯದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು 145.5 ವರ್ಷಗಳು ಬೇಕಾಗುತ್ತದೆ ಎಂದು ವರದಿ ಹೇಳಿದೆ.