ನವದೆಹಲಿ: ದೇಶದಾದ್ಯಂತ ಆರಂಭವಾಗಿರುವ ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕಾ ಅಭಿಯಾನ ಏಪ್ರಿಲ್ 25ಕ್ಕೆ ಶತದಿನಗಳನ್ನು ಪೂರೈಸಿದ್ದು, ಈ ಅಭಿಯಾನದಲ್ಲಿ ಲಸಿಕೆ ನೀಡಿರುವ ಪ್ರಮಾಣ 14.19 ಕೋಟಿ ಡೋಸ್ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಒಟ್ಟು 14,19,11,223 ಡೋಸ್‌ಗಳಷ್ಟು ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬೆಳಿಗ್ಗೆ 7 ಗಂಟೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ಈ ಡೋಸ್‌ಗಳಲ್ಲಿ ಮೊದಲ ಡೋಸ್ ತೆಗೆದುಕೊಂಡ 92,98,092 ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯು) ಮತ್ತು ಎರಡನೇ ಡೋಸ್ ತೆಗೆದುಕೊಂಡ 60,08,236 ಆರೋಗ್ಯಕಾರ್ಯಕರ್ತರು ಸೇರಿದ್ದಾರೆ. ಜತೆಗೆ, ಮೊದಲ ಡೋಸ್ ಪಡೆದ 1,19,87,192 ಮತ್ತು ಎರಡನೇ ಡೋಸ್ ಪಡೆದ 63,10,273 ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ.
ಇದಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮೊದಲ ಡೋಸೇಜ್ ಪಡೆದ 4,98,72,209 ಮಂದಿ ಎರಡನೇ ಡೋಸೇಜ್ ಪಡೆದ 79,23,295 ಫಲಾನುಭವಿಗಳೂ ಇದ್ದಾರೆ. 45 ರಿಂದ 60 ವರ್ಷ ವಯಸ್ಸಿನ ಮೊದಲ ಡೋಸ್ ಪಡೆದ 4,81,08,293 ಮತ್ತು ಎರಡನೇ ಡೋಸ್ ಪಡೆದ 24,03,633 ಫಲಾನುಭವಿಗಳು ಸೇರಿದ್ದಾರೆ.
ದೇಶದಲ್ಲಿ ಲಸಿಕೆ ಪೂರೈಸಿರುವ ಒಟ್ಟು ಪ್ರಮಾಣದಲ್ಲಿ ಶೇ 58.7ರಷ್ಟು ಲಸಿಕೆಯನ್ನು ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಮತ್ತು ಕೇರಳ ರಾಜ್ಯಗಳಿಗೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳಲ್ಲಿ ಸುಮಾರು 10 ಲಕ್ಷ ಡೋಸ್‌ಗಳಷ್ಟು ಲಸಿಕೆಗಳನ್ನು ನೀಡಲಾಗಿದೆ.
ಲಸಿಕೆ ಅಭಿಯಾನದ 100ನೇ ದಿನ (ಏಪ್ರಿಲ್ 25) ದೇಶದಾದ್ಯಂತ 9,95,288 ಡೋಸ್‌ಗಳಷ್ಟು ಲಸಿಕೆ ನೀಡಲಾಯಿತು. ಒಟ್ಟು 6,85,944 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಯಿತು. 3,09,344 ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆದುಕೊಂಡರು.
ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಶೇಕಡಾ 74.5 ರಷ್ಟು ಕೋವಿಡ್‌ನ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.