ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ 149 ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿ ಒಂದು ಪ್ರಕರಣವೂ ವರದಿಯಾಗಿಲ್ಲ. ಎಂಟು ಜಿಲ್ಲೆಗಳಲ್ಲಿ ಕಳೆದ 15 ದಿನಗಳಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ. 28 ದಿನಗಳಿಂದ ಒಂದೂ ಪ್ರಕರಣ ಇಲ್ಲದ 63 ಜಿಲ್ಲೆಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ಹೇಳಿದ್ದಾರೆ.
ಉನ್ನತ ಮಟ್ಟದ ಸಚಿವರ ಗುಂಪಿನ 24ನೇ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಶುಕ್ರವಾರ ಬೆಳಗ್ಗಿನ ವರೆಗೆ 9.43 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅದರಲ್ಲಿ ಸುಮಾರು ಮೂರು ಕೋಟಿ ಡೋಸ್‌ಗಳಷ್ಟನ್ನು ಹಿರಿಯ ನಾಗರಿಕರು ಹಾಕಿಸಿಕೊಂಡಿದ್ದಾರೆ ಎಂದೂ ಅವರು ತಿಳಿಸಿದರು.
'ಲಸಿಕೆ ಮೈತ್ರಿ' ಯೋಜನೆಯ ಭಾಗವಾಗಿ ಜಾಗತಿಕ ಸಮುದಾಯಕ್ಕೂ ಭಾರತವು ಲಸಿಕೆ ಪೂರೈಸಿದೆ. ಈ ಯೋಜನೆ ಅಡಿಯಲ್ಲಿ 85 ದೇಶಗಳಿಗೆ 6.45 ಕೋಟಿ ಡೋಸ್ ಲಸಿಕೆ ರಫ್ತು ಮಾಡಲಾಗಿದೆ.
11 ರಾಜ್ಯಗಳಲ್ಲಿ ಅತಿ ಹೆಚ್ಚು: 11 ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಏಪ್ರಿಲ್ 8ಕ್ಕೆ ಕೊನೆಗೊಂಡ ಒಂದು ವಾರದ ಪ್ರಕರಣ ಏರಿಕೆ ದರವು ಶೇ 12.93ರಷ್ಟಿದೆ. ಅಮೆರಿಕ ಮತ್ತು ಬ್ರೆಜಿಲ್ ಬಿಟ್ಟರೆ ಭಾರತದಲ್ಲಿಯೇ ಈ ದರ ಅಧಿಕವಾಗಿದೆ ಎಂದು ಎನ್‌ಸಿಡಿಸಿ (ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ) ನಿರ್ದೇಶಕ ಸುಜಿತ್ ಕುಮಾರ್ ಸಿಂಗ್ ಹೇಳಿದ್ದಾರೆ.