ಮುಂಬೈ: ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಾದ್ಯಂತ 15 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಈ ನಿರ್ಬಂಧಗಳು ಬುಧವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬರಲಿವೆ.
ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದೇವೆ. ನಾಳೆಯಿಂದ ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗುತ್ತಿದೆ. ಇದನ್ನು ಲಾಕ್ ಡೌನ್ ಎಂದು ಕರೆಯುವುದಿಲ್ಲ ಎಂದು ರಾಜ್ಯವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಉದ್ದವ್ ಠಾಕ್ರೆ ತಿಳಿಸಿದರು.
ಕೋವಿಡ್ ಗೆ ನೆರವಾಗಲು ಬಯಸುತ್ತಾರಾ ಅಥವಾ ಸೋಂಕು ನಿಯಂತ್ರಿಸಲು ಕೆಲಸ ನಿರ್ವಹಿಸುತ್ತಿರುವ ಸರ್ಕಾರದೊಂದಿಗೆ ಕೈ ಜೋಡಿಸುತ್ತಾರಾ ಎಂಬುದನ್ನು ಜನರು ನಿರ್ಧರಿಸಬೇಕಾಗಿದೆ ಎಂದು ಹೇಳಿದ ಮುಖ್ಯಮಂತ್ರಿ, ಸ್ಥಳೀಯ ರೈಲು ಸೇವೆ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾರ್ವಜನಿಕ ಸ್ಥಳಗಳು, ಎಲ್ಲಾ ಸಂಸ್ಥೆಗಳು ಮುಂದಿನ15 ದಿನಗಳ ಕಾಲ ಮುಚ್ಚಲಿವೆ. ರಸ್ತೆ ಬದಿ ವ್ಯಾಪಾರಿಗಳು ಮತ್ತು ಆಹಾರ ಮಾರಾಟಗಾರರಿಗೆ ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೂ ಅವಕಾಶ ನೀಡಲಾಗುವುದು, ಅಲ್ಲಿಂದ ಆಹಾರವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬೇಕು, ಅಲ್ಲಿಯೇ ಕುಳಿತ ಊಟ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಮೆಡಿಕಲ್ ಆಕ್ಸಿಜನ್ ಮತ್ತು ಹಾಸಿಗೆಗಳ ಕೊರತೆಯಿದ್ದು, ಮಹಾರಾಷ್ಟ್ರಕ್ಕೆ ರೆಮಿಡಿಸಿವಿರ್ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ವಾಯುಪಡೆ ವಿಮಾನಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಕೊರೋನಾ ವೈರಸ್ ರೋಗಿಗಳಿಗೆ ಕೇಂದ್ರ ಸರ್ಕಾರ ಆಕ್ಸಿಜನ್ ಪೂರೈಸಲು ನೆರವಾಗಬೇಕು. ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆರೋಗ್ಯ ಸಂಬಂಧಿತ ಮೂಲಸೌಕರ್ಯಗಳು ಒತ್ತಡವಿರುವುದಾಗಿ ಅವರು ಹೇಳಿದರು.
ಅವಶ್ಯಕ ಕೆಲಸಗಾರರಿಗೆ ಮಾತ್ರ ಸ್ಥಳೀಯ ರೈಲು ಸೇವೆ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಕಲ್ಪಿಸಲಾಗುವುದು, ಎಲ್ಲಾ ಅವಶ್ಯಕ ಕೈಗಾರಿಕೆಗಳು ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಕೊರೋನಾವೈರಸ್ ನಿರ್ಬಂಧವಿರುವ ಪ್ರದೇಶಗಳಲ್ಲಿನ ಎಲ್ಲಾ ಬಡವರು ಹಾಗೂ ಅಗತ್ಯವಿರುವವರಿಗೆ ಮುಂದಿನ ತಿಂಗಳಿನಿಂದ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿಯನ್ನು ಸರ್ಕಾರ ವಿತರಿಸಲಿದೆ ಎಂದು ಉದ್ದವ್ ಠಾಕ್ರೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮಂಗಳವಾರ 60, 212 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 35, 19, 208ಕ್ಕೆ ಏರಿಕೆಯಾಗಿದೆ. 281 ಮಂದಿ ಸಾವಿನೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 58,526ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಕೆ ತಿಳಿಸಿದೆ. ಮುಂಬೈಯಲ್ಲಿ 7,873 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 5,35,264ಕ್ಕೆ ಏರಿಕೆಯಾಗಿದೆ. 27 ಮಂದಿ ಮೃತಪಟ್ಟಿದ್ದು, ಒಟ್ಟಾರೇ ಮೃತರ ಸಂಖ್ಯೆ 12,093ಕ್ಕೆ ಏರಿಕೆಯಾಗಿದೆ.