ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೇಂದ್ರ ಸಂರಕ್ಷಿತ ಸ್ಮಾರಕಗಳು, ತಾಣಗಳು, ವಸ್ತು ಸಂಗ್ರಹಾಲಯಗಳನ್ನು ಮೇ 15 ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಗುರುವಾರ ತಿಳಿಸಿದೆ.
ಈ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಆದೇಶ ಹೊರಡಿಸಿದ್ದು, ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಇಂದು ಸಂಜೆ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಪರಿಸ್ಥಿತಿಯಿಂದಾಗಿ ಎಎಸ್‌ಐ ಅಡಿಯಲ್ಲಿರುವ ಎಲ್ಲಾ ಕೇಂದ್ರೀಕೃತ ಸಂರಕ್ಷಿತ ಸ್ಮಾರಕಗಳು, ತಾಣಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೇ 15 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಚ್ಚಲು ನಿರ್ಧರಿಸಲಾಗಿದೆ ಎಂದು ಎಎಸ್‌ಐ ತಿಳಿಸಿದೆ.
ಕಳೆದ ವರ್ಷವೂ ಎಎಸ್‌ಐ ನಿರ್ವಹಿಸುತ್ತಿದ್ದ ಎಲ್ಲಾ ಸ್ಮಾರಕಗಳು ಮತ್ತು ತಾಣಗಳನ್ನು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಮುಚ್ಚಲಾಗಿತ್ತು.