ನವದೆಹಲಿ: 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಮೇ.1ರಿಂದ ಆರಂಭವಾಗಲಿದ್ದು, ಅದಕ್ಕೆ ಅರ್ಹರು ಹೆಸರು ನೋಂದಾಯಿಸುವ ಪ್ರಕ್ರಿಯೆಗೆ ಬುಧವಾರ ಸಂಜೆ 4 ಗಂಟೆಗೆ ಚಾಲನೆ ದೊರೆಯಲಿದೆ.
18-45 ವರ್ಷ ವಯೋಮಿತಿಯ ಎಲ್ಲಾ ಆರ್ಹ ಭಾರತೀಯ ಪ್ರಜೆಗಳು ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿನ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಹೆಸರು ನೋಂದಾಯಿಸಿ, ಲಸಿಕೆ ಪಡೆಯುವ ಸಮಯವನ್ನು ನಿಗದಿ ಮಾಡಬಹುದು. ಈ ವಯೋಮಿತಿಯವರು ನೇರವಾಗಿ ಆಸ್ಪತ್ರೆಗೆ ಬಂದು ಅಲ್ಲಿಯೇ ಹೆಸರು ನೊಂದಾಯಿಸುವ ಅವಕಾಶವನ್ನು ಸರ್ಕಾರ ನೀಡಿಲ್ಲ.
ಜನದಟ್ಟಣ ತಡೆಯುವ ಸಂಬಂಧ ನೊಂದಾಯಿಸಿದವರಿಗೆ ಮಾತ್ರ ಲಸಿಕೆ
ಲಸಿಕಾ ಕೇಂದ್ರಗಳ ಬಳಿ ಜನದಟ್ಟಣೆ ತಡೆಯುವ ಉದ್ದೇಶದಿಂದ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದ್ದು, ಆನ್'ಲೈನ್ ಮೂಲಕ ಹೆಸರು ನೊಂದಾಯಿಸಿದವರಿಗೆ ಮಾತ್ರವೇ ಲಸಿಕೆ ನೀಡಲಾಗುವುದು.
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ
ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ನಾಗರೀಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳು 2 ಡೋಸ್ ಲಸಿಕೆಗೆ ತಲಾ ರೂ.250 ನಂತೆ ಶುಲ್ಕ ವಿಧಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ, 18-45 ವಯೋಮಿತಿಯವರಿಗೆ ಉಚಿತವಾಗಿ ಲಸಿಕೆ ನೀಡಲು ನಿರಾಕರಿಸಿದೆ.
ಲಸಿಕಾ ತಯಾರಿಕಾ ಕಂಪನಿಗಳಿಂದಲೇ ಲಸಿಕೆ ಖರೀದಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ
ಲಸಿಕಾ ಕಂಪನಿಗಳಿಂದ ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆ, ಸಂಸ್ಥೆಗಳು ನೇರವಾಗಿ ಖರೀದಿಸಿ ಲಸಿಕೆ ವಿತರಣೆಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಈ ವಯೋಮಿತಿಯವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡರೆ ದುಬಾರಿ ಶುಲ್ಕ ನೀಡಬೇಕಾಗುತ್ತದೆ. ಆದರೆ, ಜನಸಾಮಾನ್ಯರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಸುಮಾರು 23 ರಾಜ್ಯಗಳು 18-45 ವಯೋಮಿತಿಯವರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸುವ ಅವಕಾಶ ಕಲ್ಪಿಸಿವೆ.
ಕೋವಿನ್ ನಲ್ಲಿ ನೋಂದಣಿ
ಇದರಂತೆ ಮೇ 1ರಿಂದ ಕೊವಿಡ್ ಲಸಿಕೆ ಪಡೆಯುವ ಫಲಾನುಭವಿಗಳು ಇಂದಿನಿಂದಲೇ ಕೊವಿನ್ (Co-Win) ಆ್ಯಪ್ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ. ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ನೊಂದಾವಣಿ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.
18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಕೋವಿಡ್-19 ಲಸಿಕೆ ಪಡೆಯಲು ಇಂದು ಸಂಜೆ 4 ರಿಂದ cowin.gov.in ಹಾಗೂ ಆರೋಗ್ಯ ಸೇತು ಆ್ಯಪ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದೆ.
ಲಸಿಕೆ ಆರಂಭವಾಗುತ್ತಿದ್ದಂತೆಯೇ ಲಸಿಕಾ ಕೇಂದ್ರಗಳಲ್ಲಿ ಉಂಟಾಗುವ ಜನದಟ್ಟಣೆ ನಿಯಂತ್ರಿಸುವ ಸಲುವಾಗಿಯೇ ಕೋವಿನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಂಡು ನಿಗದಿಪಡಿಸಿದ ಸ್ಥಳ ಹಾಗೂ ದಿನಾಂಕದಂದು ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಲು ಸರ್ಕಾರ ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೋಂದಣಿ ಮಾಡಿಸಿಕೊಳ್ಳುವುದು ಹೇಗೆ...? ಇಲ್ಲಿದೆ ಮಾಹಿತಿ...
- ಮೊದಲು https://www.cowin.gov.in/home ವೆಬ್ಸೈಟ್ಗೆ ಹೋಗಬೇಕು.
- ವೆಬ್ಸೈಟ್ನ ಬಲಭಾಗದಲ್ಲಿ ಮೇಲೆ ಸೈನ್ ಇನ್ ಯುವರ್ಸೆಲ್ಫ್ ಎಂದು ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿ ಮೊಬೈಲ್ ನಂಬರ್ ನಮೂದಿಸಿ
- ನಂತರ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಸಂಖ್ಯೆಯನ್ನು ಹಾಕಿದ ಕೂಡಲೇ ಪೇಜ್ವೊಂದು ತೆರೆಯಲ್ಪಡುತ್ತದೆ. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಲಿಂಗ, ನೀವಿರುವ ಪ್ರದೇಶ, ಸಂಪೂರ್ಣ ವಿಳಾಸ, ಪಿನ್ ಕೋಡ್ಗಳನ್ನು ನಮೂದಿಸಿ.
- ಇಷ್ಟಾದ ಬಳಿಕ ಅಲ್ಲಿ ನಿಮ್ಮ ಪ್ರದೇಶದ ಸುತ್ತಮುತ್ತ ಇರುವ ಆಸ್ಪತ್ರೆಗಳ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳ ಹೆಸರೂ ಬರಲಿದ್ದು, ಯಾವುದೇ ಆಸ್ಪತ್ರೆಯನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ಮೊಬೈಲ್ಗೆ ಮೆಸೇಜ್ ಬರಲಿದ್ದು, ಅದರಂತೆ ಹೋಗಿ ಲಸಿಕೆ ಪಡೆಯಬಹುದು.
ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿ ಹಬ್ಬುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಲಸಿಕೆ ವಿತರಣೆಯನ್ನು ತೀವ್ರಗೊಳಿಸಲು ಮುಂದಾಗಿದೆ. 3 ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿ ಹೇಳಿಕೊಂಡಿದೆ. ಇಲ್ಲಿಯವರೆಗೆ ದೇಶದಲ್ಲಿ 24 ಕೋಟಿ ಡೋಸ್ ಲಸಿಕೆ ನೀಡಿದ್ದಾರೆ ಆರೋಗ್ಯ ಸಚಿವಾಲಯ ತಿಳಿಸಿದೆ.