ನವದೆಹಲಿ: 18 ವರ್ಷ ಮೇಲ್ಪಟ್ಟವರ ಕರೊನಾ ಲಸಿಕಾ ನೋಂದಣಿಗೆ ಕ್ಷಣಗಣನೇ ಆರಂಭವಾಗಿದ್ದು, ಏಪ್ರಿಲ್ 24ರಿಂದ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ)ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಶರ್ಮಾ ಅವರು ಗುರುವಾರ ತಿಳಿಸಿದ್ದಾರೆ.
ಹದಿನೆಂಟು ವರ್ಷ ಮೇಲ್ಪಟ್ಟವರು ಸರ್ಕಾರದ ಕೋವಿನ್ (COWIN.GOV.IN) ವೆಬ್ಸೈಟ್ನಲ್ಲಿ ಏಪ್ರಿಲ್ 24ರಿಂದ ನೋಂದಣಿ ಮಾಡಿಕೊಳ್ಳಬಹುದು. ಲಸಿಕಾ ಪ್ರಕ್ರಿಯೆ ಮತ್ತು ದಾಖಲಾತಿಗಳು ಒಂದೆ ಆಗಿರುತ್ತವೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.
ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ದೇಶಿ ಲಸಿಕೆಗಳ ಜತೆಯಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಸಹ ಕೆಲವೊಂದು ಕೇಂದ್ರಗಳಲ್ಲಿ ಲಸಿಕೆಯ ಮತ್ತೊಂದು ಆಯ್ಕೆ ಆಗಿರಲಿದೆ ಎಂದು ಶರ್ಮಾ ಹೇಳಿದ್ದಾರೆ. ತ್ವರಿತಗತಿಯ ಲಸಿಕಾ ಪ್ರಕ್ರಿಯೆಗಾಗಿ ಖಾಸಗಿ ಸೌಲಭ್ಯಗಳೊಂದಿಗೆ ಇನ್ನಷ್ಟು ಕೇಂದ್ರಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಜನರಿಗೆ ಅನುಕೂಲ ಆಗಲಿ ಎಂದು ಕೋವಿನ್ ವೆಬ್ಸೈಟ್ನಲ್ಲಿ ಲಸಿಕೆ ನೀಡುವ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಖಾಸಗಿ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಖಾಸಗಿ ಸಂಸ್ಥೆಗಳು ಅಥವಾ ಕೈಗಾರಿಕೆಗಳು ಲಸಿಕೆ ತೆಗೆದುಕೊಂಡ ನೌಕರರ ಸಂಖ್ಯೆಯನ್ನು ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಬೇಕೆಂದು ಶರ್ಮಾ ತಿಳಿಸಿದ್ದು, ಲಸಿಕೆ ಪಡೆದ ಬಳಿಕ ಪ್ರತಿಕೂಲಕರ ಘಟನೆಯನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕೋವಿನ್ನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?
1. ಮೊದಲು cowin.gov.in ವೆಬ್ಸೈಟ್ಗೆ ನಿಮ್ಮ ಮೊಬೈಲ್ ನಂಬರ್ನಿಂದ ಲಾಗಿನ್ ಮಾಡಬೇಕು
2. ಬಳಿಕ ನಿಮ್ಮ ಮೊಬೈಲ್ ನಂಬರ್ಗೆ ಮಸೇಜ್ ಮೂಲಕ ಒಟಿಪಿ ಬರಲಿದೆ
3. ಒಟಿಪಿ ಅನ್ನು ನಮೂದಿಸಿ ವೇರಿಫೈ ಬಟನ್ ಒತ್ತಬೇಕು
4. ಒಟಿಪಿ ಮಾನ್ಯವಾಗುತ್ತಿದ್ದಂತೆ ಲಸಿಕಾ ನೋಂದಣಿ ಪೇಜ್ ಓಪನ್ ಆಗುತ್ತದೆ
5. ಬಳಿಕ ನಿಮ್ಮ ಫೋಟೋ ಐಡಿ ಫ್ರೂಫ್ ಸೇರಿದಂತೆ ನೋಂದಣಿ ಪ್ರಕ್ರಿಯೆಯಲ್ಲಿ ಕೇಳಿರುವ ಅವಶ್ಯಕ ಮಾಹಿತಿಯನ್ನು ನಮೂದಿಸಬೇಕು
6. ನೀವು ಯಾವುದೇ ಕೊಮೊರ್ಬಿಡಿಟಿಗಳನ್ನು ಹೊಂದಿದ್ದೀರಾ ಎಂದು ನಿಮ್ಮನ್ನು ಕೇಳಲಾಗುತ್ತದೆ. 'ಹೌದು' ಅಥವಾ 'ಇಲ್ಲ' ಎಂದು ಕ್ಲಿಕ್ ಮಾಡುವ ಮೂಲಕ ಉತ್ತರಿಸಬೇಕು.
7. ವಿವರಣೆಯನ್ನು ನಮೂದಿಸಿದ ಬಳಿಕ ಕೊನೆಯಲ್ಲಿ ರಿಜಿಸ್ಟರ್ ಬಟನ್ ಒತ್ತಬೇಕು.
8. ಇದಾದ ಬಳಿಕ ನೀವು ನೋಂದಣಿ ಯಶಸ್ವಿಯಾಗಿದೆ ಎಂಬ ದೃಢೀಕರಣ ಸಂದೇಶವು ನಿಮ್ಮ ಮೊಬೈಲ್ ನಂಬರ್ಗೆ ಬರುತ್ತದೆ. ನೋಂದಣಿ ಮುಗಿದ ನಂತರ, ನಿಮಗೆ 'ಖಾತೆ ವಿವರಗಳು' ತೋರಿಸಲಾಗುತ್ತದೆ. ವೈದ್ಯರ ಭೇಟಿಯನ್ನು 'ಖಾತೆ ವಿವರಗಳು' ಪುಟದಿಂದ ನಿಗದಿಪಡಿಸಬಹುದು
9. ವೈದ್ಯರ ಭೇಟಿಗೆ ಸಂಬಂಧಿಸಿದ ವೇಳಾಪಟ್ಟಿ ಸೂಚಿಸುವ ಬಟನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ, ನಿಮ್ಮ ಅಪಾಯಿಂಟ್ಮೆಂಟ್ ನಿಗದಿಪಡಿಸಿದರೆ ನೋಂದಣಿ ಪ್ರಕ್ರಿಯೆ ಮುಗಿದಂತೆ.
10. ಪುಟದ ಕೆಳಗಿನ ಬಲಭಾಗದಲ್ಲಿರುವ 'ಇನ್ನಷ್ಟು ಸೇರಿಸಿ' ಬಟನ್ ಕ್ಲಿಕ್ ಮಾಡುವುದರ ಮೂಲಕ ಒಂದೇ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಇನ್ನೂ ಮೂರು ಜನರನ್ನು ಸೇರಿಸಲು ನಾಗರಿಕರಿಗೆ ಅವಕಾಶವಿದೆ. ಸೇರಿಸಬೇಕಾದ ವ್ಯಕ್ತಿಗಳ ಎಲ್ಲಾ ವಿವರಗಳನ್ನು ನಮೂದಿಸಿದ ಬಳಿಕ 'ಸೇರಿಸು' ಬಟನ್ ಕ್ಲಿಕ್ ಮಾಡಿ.
11. ನಿಮ್ಮ ವ್ಯಾಕ್ಸಿನೇಷನ್ ಅನ್ನು ಕಾಯ್ದಿರಿಸಲು, ನೀವು ಆರೋಗ್ಯ ಸೇತು ಅಪ್ಲಿಕೇಶನ್ ಸಹ ಬಳಸಬಹುದು. ಅದಕ್ಕಾಗಿ ಪ್ರತ್ಯೇಕ ಟ್ಯಾಬ್ ರಚಿಸಲಾಗಿದೆ. ನಿಮ್ಮ ಹೆಸರು, ವಯಸ್ಸು ಸೇರಿದಂತೆ ಕೆಲವು ವಿವರಗಳನ್ನು ಭರ್ತಿ ಮಾಡಲು ಮತ್ತು ವ್ಯಾಕ್ಸಿನೇಷನ್ಗಾಗಿ ನಿಮ್ಮನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ.
ಮೇ 1 ರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ನೀಡಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಹೆಚ್ಚು ಸಡಿಲೀಕೃತವಾದ ಮತ್ತು ತ್ವರಿತವಾದ ಮೂರನೇ ಹಂತದ ಲಸಿಕಾ ಅಭಿಯಾನ ದೇಶಾದ್ಯಂತ ಆರಂಭವಾಗಲಿದೆ.
ಲಸಿಕೆ ಉತ್ಪಾದನೆ ಮತ್ತು ಪೂರೈಕೆಗೆ ಹಲವು ಇನ್ಸೆಂಟೀವ್ಗಳನ್ನು ನೀಡಿರುವ ಸರ್ಕಾರ, ಲಸಿಕೆ ಉತ್ಪಾದಕರು ಶೇ. 50 ರಷ್ಟು ಉತ್ಪಾದಿತ ಲಸಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಉಳಿದ ಶೇ. 50 ರಷ್ಟು ಲಸಿಕೆಗಳನ್ನು ರಾಜ್ಯ ಸರ್ಕಾರಕ್ಕೂ, ತೆರೆದ ಮಾರುಕಟ್ಟೆಗೂ ನೇರವಾಗಿ ವಿತರಿಸಬಹುದು ಎಂದು ಹೇಳಿದೆ. ಹೀಗೆ ನೇರವಾಗಿ ವಿತರಿಸಲು ಅವಕಾಶ ನೀಡಿರುವ ಲಸಿಕೆಗಳನ್ನು ಖಾಸಗಿ ಲಸಿಕಾ ಕೇಂದ್ರಗಳು ಬಳಸಿಕೊಂಡು ಮುಂಚೆಯೇ ನಿಗದಿ ಮಾಡಿದ ಬೆಲೆಯಲ್ಲಿ ಎಲ್ಲಾ ವಯಸ್ಕರಿಗೂ.. ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಲು ಅವಕಾಶವಿರುತ್ತದೆ.