ನವದೆಹಲಿ: 18ರಿಂದ 45 ವರ್ಷದೊಳಗಿನವರು ಕೋವಿಡ್-19 ಲಸಿಕೆ ಪಡೆಯಲು ಕೋವಿನ್ ವೆಬ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಬೇಕು ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
45 ವರ್ಷ ಮೇಲ್ಪಟ್ಟವರಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ಲಸಿಕೆ ನೀಡಲಾಗುವುದು. 18 ವರ್ಷ ಮೇಲ್ಪಟ್ಟವರು ಏಪ್ರಿಲ್ 28ರಿಂದ ಕೋವಿನ್ ಫ್ಲಾಟ್‌ಫಾರಂ ಮತ್ತು ಆರೋಗ್ಯಸೇತು ಆಯಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬಹುದು ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತ್ವರಿತಗತಿಯಲ್ಲಿ ಏರಿಕೆಯಾದ್ದರಿಂದ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
'18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್‌ಗೆ ಅನುಮತಿ ನೀಡಿದ ನಂತರ ಲಸಿಕೆ ಪಡೆಯಲು ಹೆಚ್ಚಿನ ಜನಸಂದಣಿಯಾಗುವ ಸಾಧ್ಯತೆ ಇದೆ. ಹಾಗಾಗಿ, 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಪಡೆಯಲು ಕೋವಿನ್ ವೆಬ್‌ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನೋಂದಣಿಯಾಗದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ಬಂದರೆ ಅಂಥವರಿಗೆ ಅನುಮತಿ ನೀಡಲಾಗದು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ನೇರವಾಗಿ ಕೋವಿಡ್ ಲಸಿಕೆಗಳನ್ನು ಲಸಿಕಾ ತಯಾರಕ ಕಂಪನಿಗಳಿಂದಲೇ ಖರೀದಿಸಲಿವೆ ಎಂದೂ ಮೂಲಗಳು ತಿಳಿಸಿವೆ.