ನವದೆಹಲಿ: ಏಪ್ರಿಲ್ 11ರಿಂದ 14ರವರೆಗೆ ದೇಶದಲ್ಲಿ ವ್ಯಾಕ್ಸಿನ್ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವ್ಯಾಕ್ಸಿನ್ ಮೂಲಕ ಹೆಚ್ಚಿನ ಜನರಿಗೆ ಲಸಿಕೆ ಹಾಕಿಸಬೇಕು, 45ವರ್ಷಕ್ಕೂ ಮೇಲ್ಪಟ್ಟವರಿಗೆ ತ್ವರಿತಗತಿಯಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವಿಡಿಯೋ ಸಂವಾದದ ಸಭೆ ಬಳಿಕ ಮಾತನಾಡಿದ ಅವರು, ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಬೇಕಾಗಿದೆ. ಶೇ.70 ರಷ್ಟು ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಬೇಕಾಗಿದೆ. ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದಾಗ ಪಾಸಿಟಿವ್ ಕೇಸ್ ಗಳು ಅಧಿಕ ಸಂಖ್ಯೆಯಲ್ಲಿ ಬರುತ್ತವೆ. ಸೂಕ್ತ ಮಾದರಿಗಳ ಸಂಗ್ರಹ ಅತ್ಯಂತ ಪ್ರಮುಖವಾಗಿದೆ. ಸೂಕ್ತ ಆಡಳಿತದ ಮೂಲಕ ಇದನ್ನು ಪರಿಶೀಲಿಸಬೇಕಾಗಿದೆ ಎಂದರು.
ಕೊರೋನಾ ತಡೆಗೆ ಯುದ್ದೋಪಾದಿ ಕಾರ್ಯ ಅತ್ಯಗತ್ಯವಾಗಿದೆ. ಸೋಂಕು ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಅಗತ್ಯ. ಸೋಂಕು ಪತ್ತೆ, ಪರೀಕ್ಷೆ ಹಾಗೂ ಉಪಚಾರ ಅನೀವಾರ್ಯವಾಗಿದೆ.ದೇಶದಲ್ಲಿ ಮೊದಲನೇ ಅಲೆ ಮುಗಿದಿದ್ದು, ಪಾಸಿಟಿವ್ ದರ ಹೆಚ್ಚಳವಾಗುತ್ತಿದೆ. ಪಾಸಿಟಿವ್ ದರವನ್ನು ಶೇಕಡಾ 5ಕ್ಕಿಂತ ಕಡಿಮೆ ಮಾಡಬೇಕಾಗಿದೆ. ಲಸಿಕೆ ನೀಡಿಕೆ ಅಭಿಯಾನವನ್ನು ಚುರುಕುಗೊಳಿಸಬೇಕಾಗಿದೆ.ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಇದಕ್ಕಾಗಿ ಸರ್ವ ಪಕ್ಷ ಸಭೆ ನಡೆಸಿ ಸರ್ಕಾರ ಒಮ್ಮತದ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಸಲಹೆ ನೀಡಿದರು.