ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಕೋವಿಡ್-19 ದೃಢಪಡುವ ಪ್ರಮಾಣ (ಪಾಸಿಟಿವಿಟಿ ರೇಟ್) ಕಳೆದ 12 ದಿನಗಳಲ್ಲಿ ದುಪ್ಪಟ್ಟಾಗಿದ್ದು, ಶೇ 16.69ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
'ಈ ಮೊದಲು ಪಾಸಿಟಿವಿಟಿ ಪ್ರಮಾಣ ಶೆ 8ರಷ್ಟಿತ್ತು. ಆದರೆ, ಈ 12 ದಿನಗಳಲ್ಲಿ ಇದು ದುಪ್ಪಟ್ಟಾಗಿದೆ' ಎಂದು ಸಚಿವಾಲಯ ತಿಳಿಸಿದೆ.
ಈ ಮೊದಲು, ಒಂದು ವಾರದ ಅವಧಿಯಲ್ಲಿನ ಪಾಸಿಟಿವಿಟಿ ಪ್ರಮಾಣ ಶೇ 3.05ರಷ್ಟಿತ್ತು. ಆದರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಪ್ರಮಾಣದಲ್ಲಿಯೂ ಹೆಚ್ಚಳ ಕಂಡುಬಂದಿದ್ದು, ಶೇ 13.54ರಷ್ಟಾಗಿದೆ ಎಂದೂ ತಿಳಿಸಿದೆ.
ದೇಶದಲ್ಲಿ ಕೋವಿಡ್-19 ತೀವ್ರಗತಿಯಲ್ಲಿ ಪ್ರಸರಣವಾಗುತ್ತಿರುವುದನ್ನು ಈ ಅಂಕಿ-ಅಂಶಗಳು ಹೇಳುತ್ತವೆ. ದೇಶದಲ್ಲಿ ಭಾನುವಾರ 2,61,500 ಹೊಸ ಪ್ರಕರಣಗಳು ವರದಿಯಾಗಿದ್ದು, 1,501 ಜನರು ಈ ಪಿಡುಗಿನಿಂದಾಗಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18 ಲಕ್ಷ ದಾಟಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ವರದಿಯಾದ ಪ್ರಕರಣಗಳ ಪೈಕಿ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 10 ರಾಜ್ಯಗಳಲ್ಲಿ ಕಂಡುಬಂದ ಸೋಂಕಿನ ಪ್ರಮಾಣ ಶೇ 78.56 ಎಂದು ತಿಳಿಸಿದೆ.