ನವದೆಹಲಿ: ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಬುಧವಾರ ಮತ್ತೊಂದು ದಾಖಲೆ ಬರೆದಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 1,84,372 ಕೊರೋನಾ ಪ್ರಕರಣ ವರದಿಯಾಗಿದೆ.
ನಿನ್ನೆ ಒಂದೇ ದಿನ ಬರೋಬ್ಬರಿ 1,027 ಮಂದಿ ಬಲಿಯಾಗಿದ್ದು, ಇದರೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 1,72,085ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಕಳೆದ 35ದಿನಗಳಿಂದ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 13,65,704ಕ್ಕೆ ಏರಿಕೆಯಾಗಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 82,339 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1,23,36,036ಕ್ಕೆ ತಲುಪಿದೆ.
ಭಾರತದಲ್ಲಿ ಒಂದೇ ದಿನ 14,12,047 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 25,66,26,850 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ.
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 11,11,79,578 ದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.