ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರು ಗುರುವಾರ ಕೊರೋನಾ ಎರಡನೇ ಡೋಸ್ ಲಸಿಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಏಮ್ಸ್ ನಲ್ಲಿ ಇಂದು ಕೊರೋನಾ 2ನೇ ಡೋಸ್ ಲಸಿಕೆ ಪಡೆದುಕೊಂಡೆ. ವೈರಸ್ ವಿರುದ್ಧ ಹೋರಾಡಲು ನಮ್ಮಲ್ಲಿ ಇರುವ ಕೆಲವು ವಿಧಾನಗಳಲ್ಲಿ ಲಸಿಕೆ ಕೂಡ ಒಂದು, ನೀವು ಲಸಿಕೆ ಪಡೆದುಕೊಳ್ಳಲು ಅರ್ಹರಾಗಿದ್ದರೆ, ಶೀಘ್ರಗತಿಯಲ್ಲಿ ಲಸಿಕೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.
ದೆಹಲಿಯ ಏಮ್ಸ್ ನಲ್ಲಿ ಪಾಂಡಿಚೆರಿ ಮೂಲದ ಪಿ ನಿವೇದಾ ಹಾಗೂ ಪಂಜಾಬ್ ಮೂಲಕ ನಿಶಾ ಶರ್ಮಾ ಎಂಬುವವರು ಪ್ರಧಾನಿ ಮೋದಿಯವರಿಗೆ ಲಸಿಕೆ ನೀಡಿದ್ದಾರೆ. ಮಾರ್ಚ್ 1 ರಂದು ಪ್ರಧಾನಿ ಮೋದಿಯವರು ಮೊದಲನೇ ಡೋಸ್ ಲಸಿಕೆ ಪಡೆದುಕೊಂಡಿದ್ದರು.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ.
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 7,59,79,651 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.