ನವದೆಹಲಿ: 1980 ರಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿದ್ದ ಆಯುಷ್-64 ಔಷಧವನ್ನು ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಬಳಸಬಹುದೆಂದು ಆಯುಷ್ ಸಚಿವಾಲಯ ಗುರುವಾರ ಹೇಳಿದೆ.
ಈ ನಿಟ್ಟಿನಲ್ಲಿ ಮೂರು ಸೆಂಟರ್ ಗಳಲ್ಲಿ ಔಷಧದ ಪ್ರಯೋಗವನ್ನು ನಡೆಸಲಾಗಿದೆ ಎಂದು ಪುಣೆಯ ಸಾಂಕ್ರಾಮಿಕ ರೋಗಗಳ ಸೆಂಟರ್ ನಿರ್ದೇಶಕ ಅರವಿಂದ್ ಚೋಪ್ರಾ ವರ್ಚುಯಲ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ತಿಳಿಸಿದರು.
ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ವಿವಿ, ವಾರ್ದಾದ ದತ್ತ ಮೇಘೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮುಂಬೈನ ಬಿಎಂಸಿ ಕೋವಿಡ್ ಸೆಂಟರ್ ನಡೆಸಿದ ಪ್ರಯೋಗದಲ್ಲಿ ತಲಾ 70 ಮಂದಿ ಪಾಲ್ಗೊಂಡಿದ್ದರು.
ಆಯುಷ್-64 ಗುಣಮಟ್ಟದ ಆರೈಕೆಗೆ ಸಂಬಂಧಿಸಿದ್ದು, ಮಹತ್ವದ ಸುಧಾರಣೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಅವಧಿ ಕಡಿಮೆಯಾಗುವುದು ಕಂಡುಬಂದಿದೆ ಎಂದು ಆಯುಷ್ ಸಚಿವಾಲಯ-ಸಿಎಸ್ ಐಆರ್ ಸಹಭಾಗಿತ್ವದ ಗೌರವಾನಿತ್ವ ಮುಖ್ಯ ಕ್ಲಿನಿಕಲ್ ಸಂಯೋಜಕ ಚೋಪ್ರಾ ತಿಳಿಸಿದ್ದಾರೆ.
ಆಯುಷ್-64 ಔಷಧ, ಆತಂಕ, ಒತ್ತಡ, ಆಯಾಸ, ಹಸಿವು, ನಿದ್ರೆ ಮತ್ತಿರ ಸಾಮಾನ್ಯ ಆರೋಗ್ಯದ ಮೇಲೂ ಅನೇಕ ರೀತಿಯ ತೀವ್ರಗತಿಯ ಪ್ರಯೋಜನಕಾರಿ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
ಸೌಮ್ಯ,ಸಾಧಾರಣ ಸ್ವರೂಪದ ಕೋವಿಡ್-19 ಪ್ರಕರಣಗಳ ನಿರ್ವಹಣೆಯಲ್ಲಿ ಆಯುಷ್ -64 ಔಷಧವನ್ನು ಸೇರಿಸುವಂತೆ ರಾಜ್ಯಗಳ ನಿಯಂತ್ರಕರು, ಪ್ರಾಧಿಕಾರಿಗಳಿಗೆ ತಿಳಿಸುವಂತೆ ಆಯುಷ್- ಸಿಎಸ್ ಐಆರ್ ಜಂಟಿ ನಿರ್ವಹಣಾ ಸಮಿತಿ, ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ಆಯುಷ್-64 ಔಷಧವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ಆಯುರ್ವೇದ ಪದ್ಧತಿಯಾಗಿದೆ. ಆಯುರ್ವೇದ ಮತ್ತು ಯೋಗ ಆಧಾರದ ಮೇಲೆ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ ಮೆಂಟ್ ಈ ಔಷಧವನ್ನು ಶಿಫಾರಸು ಮಾಡಿದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.
ಆಯುಷ್-64 ಅಧ್ಯಯನದಿಂದ ಬರುವ ಫಲಿತಾಂಶವನ್ನು ಸಮಿತಿ ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಪ್ರಕರಣಗಳಲ್ಲಿ ಈ ಔಷಧವನ್ನು ಬಳಸಬಹುದೆಂದು ಶಿಫಾರಸು ಮಾಡಲಾಗಿದೆ ಎಂದು ಐಸಿಎಂಆರ್ ಮಾಜಿ ಡೈರೆಕ್ಟರ್ ಜನರಲ್ ವಿ ಎಂ ಕಟೋಚ್ ಹೇಳಿದ್ದಾರೆ.