ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಮತ್ತೆ ಸ್ಫೋಟಗೊಂಡಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 81,466 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ ವರ್ಷ ಅಕ್ಟೋಬರ್ 11 ನಂತರದ ಮತ್ತು ಈ ವರ್ಷದ ಈ ವರೆಗಿನ ಸರ್ವಾಧಿಕ ಗರಿಷ್ಠ ಸಂಖ್ಯೆಯಾಗಿದೆ.
ಅಕ್ಟೋಬರ್ 11 ರಂದು 24 ತಾಸಿನಲ್ಲಿ 74,383 ಪ್ರಕರಣಗಳು ದಾಖಲಾಗಿದ್ದವು. ನಂತರ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲು. ಇದೇ ವೇಳೆ ದೇಶದಲ್ಲಿ 469 ಮಂದಿ ಸೋಂಕಿಗೆ ಬಲಿಯಾಗಿದ್ದು, ಕಳೆದ 117 ದಿನಗಳ ಗರಿಷ್ಠವಾಗಿದೆ.
23ನೇ ದಿನವೂ ಹೊಸ ಕೇಸ್ ಗಳು ಏರುಗತಿಯಲ್ಲಿರುವ ಕಾರಣ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,14,696ಕ್ಕೆ ತಲುಪಿದೆ.
ಒಂದೇ ದಿನ 81,466 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,23,03,131ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಚೆ ಕೂಡ 1,63,396ಕ್ಕೆ ಏರಿಕೆಯಾಗಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 50,356 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1,15,25,039ಕ್ಕೆ ತಲುಪಿದೆ.
ಇನ್ನು ಭಾರತದಲ್ಲಿ ಒಂದೇ ದಿನ 11,13,966 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 24,59,12,587 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ.
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 6,87,89,138 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.