ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 89,129 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
85 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಒಂದೇ ದಿನ ಸೋಂಕು ಪತ್ತೆಯಾಗುತ್ತಿರುವುದು ಕಳೆದ 6 ತಿಂಗಳ ಅವಧಿಯಲ್ಲಿ ಇದೇ ಮೊದಲು. ಇದೇ ವೇಳೆ 714 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದು ನಾಲ್ಕು ತಿಂಗಳಿನಲ್ಲೇ ಗರಿಷ್ಠ ಸಾವಿನ ಸಂಖ್ಯೆಯಾಗಿದೆ.
ಹೊಸ ಸೋಂಕಿನೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೋನಾಪೀಡಿತರ ಸಂಖ್ಯೆ 1,23,92,260ಕ್ಕೆ ಏರಿದ್ದರೆ, ಮೃತರ ಸಂಖ್ಯೆ 1,64,110ಕ್ಕೆ ಹೆಚ್ಚಳವಾಗಿದೆ.
2020ರ ಅ.2 ರಂದು ದೇಶದಲ್ಲಿ 81,484 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಡಿ.6 ರಂದು 482 ಮಂದಿ ಸಾವೀಗಾಡಿದ್ದರು. ಆನಂತರ ಇಷ್ಟೊಂದು ಸಂಖ್ಯೆಯ ಸೋಂಕು, ಸಾವು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.
ಈ ನಡುವೆ ಸತತ 24ನೇ ದಿನವೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,58,909ಕ್ಕೆ ಹೆಚ್ಚಳವಾಗಿದೆ. ಇದು ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇ.5ರಷ್ಟಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 44,202 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1,15,69,241ಕ್ಕೆ ತಲುಪಿದೆ.
ಭಾರತದಲ್ಲಿ ಒಂದೇ ದಿನ 10,46,605 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 24,69,59,192 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ.
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 7,30,54,295 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.