ನವದೆಹಲಿ: ಕೋವಿಡ್-19 ನಿಂದಾಗಿ ಭಾರತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದರೆ ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ಮೂರು ಮಿಲಿಯನ್ ದಾಟಿದೆ.
ಜಾಗತಿಕ ಮಟ್ಟದಲ್ಲಿ ವಿಶ್ವದಾದ್ಯಂತ ಲಸಿಕೆ ಅಭಿಯಾನದಲ್ಲಿ ಪದೇ ಪದೇ ಉಂಟಾಗುತ್ತಿರುವ ಹಿನ್ನೆಡೆ ಹಾಗೂ ಬ್ರಿಜೆಲ್, ಭಾರತ, ಫ್ರಾನ್ಸ್ ಸೇರಿದಂತೆ ಹಲವೆಡೆ ಉಂಟಾಗುತ್ತಿರುವ ಕೋವಿಡ್-19 ಬಿಕ್ಕಟ್ಟಿನ ಪರಿಣಾಮ ಜಗತ್ತಿನಾದ್ಯಂತ ಕೋವಿಡ್-19 ನಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆ ಹೆಚ್ಚಳವಾಗಿದೆ.
ಕೋವಿಡ್-19 ನಿಂದ ಜೀವ ಕಳೆದುಕೊಂಡಿರುವವರ ಸಂಖ್ಯೆ ಉಕ್ರೇನ್, ವೆನಿಜ್ಯುವೆಲಾ, ಮೆಟ್ರೋಪಾಲಿಟನ್ ಲಿಸ್ಬಾನ್, ಪೋರ್ಚುಗಲ್ ಜನಸಂಖ್ಯೆಯ ಪ್ರಮಾಣಕ್ಕೆ ಸರಿಸಮವಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ವಾಸ್ತವದಲ್ಲಿ ಲಭ್ಯವಾಗುತ್ತಿರುವ ಅಂಕಿ-ಅಂಶಗಳಿಗಿಂತಲೂ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2019 ರಲ್ಲಿ ಕಾಣಿಸಿಕೊಂಡ ವೈರಾಣು 100 ಮಿಲಿಯನ್ ಜನರನ್ನು ಬಾಧಿಸಿದ್ದು, ಜಾಗತಿಕ ಆರ್ಥಿಕತೆ ಬುಡಮೇಲಾಗುವಂತೆ ಮಾಡಿದೆ. ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದ್ದರೂ, 2 ನೇ ಅಲೆಯ ತೀವ್ರತೆಗೆ ನವದೆಹಲಿ ವಾರಾಂತ್ಯದ ಲಾಕ್ ಡೌನ್ ಮೊರೆ ಹೋಗಿದೆ.
ಭಾರತ ಒಂದರಲ್ಲೇ ಕಳೆದ ಒಂದು ತಿಂಗಳಲ್ಲಿ 2 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗಿದ್ದರೆ, 2 ನೇ ಅಲೆಯ ತೀವ್ರತೆಗೆ ಬಾಂಗ್ಲಾದೇಶ, ಪಾಕಿಸ್ತಾನಗಳು ಹೊಸದಾಗಿ ನಿರ್ಬಂಧ ಜಾರಿಗೊಳಿಸುವ ಮೂಲಕ ಅದಾಗಲೇ ಕೋವಿಡ್-19 ನಿಂದ ಉಂಟಾದ ಕರಾಳ ಪರಿಸ್ಥಿತಿಯನ್ನು ಎದುರಿಸಿರುವ ದಕ್ಷಿಣ ಏಷ್ಯಾದ ರಾಷ್ಟ್ರಗಳ ಆಶಾಕಿರಣವೂ ಕಮರಿ ಹೋಗಿದೆ.
ಜಾಗತಿಕ ಮಟದಲ್ಲಿ 2 ಮಿಲಿಯನ್ ಸಾವು ಸಂಭವಿಸಿದಾಗ ಯುರೋಪ್ ರಾಷ್ಟ್ರಗಳಲ್ಲಿ ಹಾಗೂ ಅಮೆರಿಕಾದಲ್ಲಿ ಲಸಿಕೆ ಅಭಿಯಾನ ಪ್ರಾರಂಭಗೊಂಡಿದ್ದವು. ಈಗ ಲಸಿಕೆ ಅಭಿಯಾನ 190 ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಆದರೆ ಈಗ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪ್ರಕರಣಗಳು ಏರುಗತಿಯಲ್ಲಿದ್ದು, ದಿನವೊಂದಕ್ಕೆ ಸರಾಸರಿ 12,000 ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದರೆ, 700,000 ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.