ನವದೆಹಲಿ: ದೇಶದಾದ್ಯಂತ ಆವರಿಸಿರುವ ಕೊರೊನಾ ವೈರಸ್‌ನ ಕಾರಣ, ಮಕ್ಕಳು ಹಲವು ತಿಂಗಳುಗಳಿಂದ ಶಾಲೆಗಳಿಗೆ ಹೋಗಿಲ್ಲ. ನಾಲ್ವರ ಪೈಕಿ ಮೂವರು ವಿದ್ಯಾರ್ಥಿಗಳು ತರಗತಿಗಳಿಗೆ ಹೋಗಿ, ಸ್ನೇಹಿತರನ್ನು ಭೇಟಿಯಾಗಲು ಉತ್ಸುಕರಾಗಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆ ಪುನರಾರಂಭ ಮಾರ್ಗಸೂಚಿಯ ಸಂಪೂರ್ಣ ಜ್ಞಾನ ಹೊಂದಿಲ್ಲ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ.
ಶಾಲೆಗಳನ್ನು ಪುನಃ ತೆರೆಯುವ ನಿರೀಕ್ಷೆಯಿಂದ ಶೇ 78ರಷ್ಟು ವಿದ್ಯಾರ್ಥಿಗಳು ಅತೀವ ಸಂತೋಷದಲ್ಲಿದ್ದಾರೆ. ಆದರೆ ಶೇ 22ರಷ್ಟು ವಿದ್ಯಾರ್ಥಿಗಳು ತಮ್ಮ ಶಾಲಾ ಸ್ನೇಹಿತರನ್ನು ಭೇಟಿಯಾಗಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಭೀತಿ ವ್ಯಕ್ತಪಡಿಸಿದ್ದಾರೆ ಎಂದು ಸ್ಮೈಲ್ ಫೌಂಡೇಶನ್ ನಡೆಸಿದ ಸಮೀಕ್ಷೆ ತಿಳಿಸಿದೆ.
ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. 8ರಿಂದ 18 ವರ್ಷ ವಯಸ್ಸಿನೊಳಗಿನ ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಕಾರಣ, ಶಾಲೆಯಲ್ಲಿ ತರಗತಿ ಶಿಕ್ಷಣದ ಜೊತೆಗೆ ಆನ್‌ಲೈನ್ ಶಿಕ್ಷಣವೂ ಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಶೇ 39ರಷ್ಟು ವಿದ್ಯಾರ್ಥಿಗಳಿಗೆ ಶಾಲೆ ಪುನರಾರಂಭದ ಮಾರ್ಗಸೂಚಿಗಳ ಬಗ್ಗೆ ಸಂಪೂರ್ಣ ಅರಿವು ಇಲ್ಲ. ಶೇ 41ರಷ್ಟು ವಿದ್ಯಾರ್ಥಿಗಳು ಶಾಲೆಗಳಲ್ಲಿ ಕೋವಿಡ್ -19 ನಿಯಮಾವಳಿಗಳನ್ನು ಸಂಪೂರ್ಣವಾಗಿ ಪಾಲಿಸಲು ಕಷ್ಟ ಎಂದಿದ್ದಾರೆ.
ಕಳೆದ ವರ್ಷವಿಡೀ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನದ ಮೂಲಕ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಆದಾಗ್ಯೂ ಕಲಿಕೆಯಲ್ಲಿ ಗಮನಾರ್ಹ ಅಂತರ ಕಂಡುಬಂದಿದೆ. ಹೀಗಾಗಿ ಶಾಲೆಗಳಿಗೆ ಮರಳುವಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಾಕಷ್ಟು ಶ್ರಮ ವಹಿಸಬೇಕಿದೆ ಎಂದು ಸ್ಮೈಲ್ ಪ್ರತಿಷ್ಠಾನದ ಸಹ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಟ್ರಸ್ಟಿ ಶಂತನು ಮಿಶ್ರಾ ಹೇಳಿದ್ದಾರೆ.
ಕನಿಷ್ಠ ಶೇ 83ರಷ್ಟು ವಿದ್ಯಾರ್ಥಿಗಳು ತಮ್ಮ ಸ್ನೇಹಿತರನ್ನು ಭೇಟಿಯಾಗುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಶಾಲೆಗಳು ಮತ್ತೆ ತೆರೆದಾಗ ಮಧ್ಯಾಹ್ನದ ಬಿಸಿಯೂಟ ಸೇವಿಸುವ ಬಗ್ಗೆ ಶೇ 52ರಷ್ಟು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.