ಜಿನಿವಾ: ಭಾರತದಲ್ಲಿ ಜನರು ಅನಗತ್ಯವಾಗಿ ಆಸ್ಪತ್ರೆಗಳಿಗೆ ಧಾವಿಸುವ ಮೂಲಕ ಬೃಹತ್ ಸಮಾವೇಶಗಳು, ಹೆಚ್ಚು ಸಾಂಕ್ರಾಮಿಕವಾಗಿರುವ ರೂಪಾಂತರಿತ ತಳಿಗಳು ಮತ್ತು ಕಡಿಮೆ ಲಸಿಕೆ ನೀಡಿಕೆ ದರ ಇವುಗಳಿಂದಾಗಿ ಹೆಚ್ಚುತ್ತಿರುವ ಕೋವಿಡ್-19 ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಮಂಗಳವಾರ ಹೇಳಿದೆ.
ಭಾರತದಲ್ಲೀಗ ಕೊರೋನ ವೈರಸ್ ಸಾವುಗಳ ಸಂಖ್ಯೆ ಎರಡು ಲಕ್ಷದ ಸನಿಹ ತಲುಪಿದ್ದು,ಸಾಕಷ್ಟು ಆಮ್ಲಜನಕ ಪೂರೈಕೆ ಮತ್ತು ಹಾಸಿಗೆಗಳು ಇಲ್ಲದ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಪ್ರವೇಶವನ್ನು ನಿರಾಕರಿಸುತ್ತಿವೆ.
ಡಬ್ಲ್ಯುಎಚ್‌ಒ 4,000 ಆಮ್ಲಜನಕ ಸಾಂದ್ರೀಕರಣ ಸಾಧನಗಳು ಸೇರಿದಂತೆ ಪ್ರಮುಖ ಉಪಕರಣಗಳು ಮತ್ತು ಪೂರೈಕೆಗಳನ್ನು ಭಾರತಕ್ಕೆ ಒದಗಿಸುತ್ತಿದೆ ಎಂದು ಅದರ ವಕ್ತಾರ ತಾರಿಕ್ ಜಸರೆವಿಕ್ ತಿಳಿಸಿದರು.
ಶೇ.15ಕ್ಕೂ ಕಡಿಮೆ ಕೋವಿಡ್-19 ರೋಗಿಗಳಿಗೆ ನಿಜಕ್ಕೂ ಆಸ್ಪತ್ರೆಗಳಿಗೆ ದಾಖಲಾಗುವ ಅಗತ್ಯವಿದೆ ಮತ್ತು ಇದಕ್ಕೂ ಕಡಿಮೆ ರೋಗಿಗಳಿಗೆ ಆಮ್ಲಜನಕ ಅಗತ್ಯವಾಗಿದೆ ಎಂದು ಹೇಳಿದ ಅವರು,ಕೊರೋನವೈರಸ್ಗೆ ಮನೆಯಲ್ಲಿಯೇ ಪರಿಣಾಮಕಾರಿ ಉಪಚಾರವನ್ನು ಪಡೆಯಬಹುದು,ಆದರೆ ಇದರ ಬಗ್ಗೆ ಸರಿಯಾಗಿ ಮಾಹಿತಿಯಿಲ್ಲದೆ ಹಲವಾರು ಜನರು ಆಸ್ಪತ್ರೆಗಳಿಗೆ ಧಾವಿಸುತ್ತಿರುವುದು ಸಮಸ್ಯೆಯನ್ನುಂಟು ಮಾಡಿದೆ ಎಂದರು.
ಸಮುದಾಯ ಮಟ್ಟದ ಕೇಂದ್ರಗಳು ರೋಗಿಗಳ ತಪಾಸಣೆ ನಡೆಸಬೇಕು ಮತ್ತು ಚಿಕಿತ್ಸೆಯ ಸರದಿಯನ್ನು ನಿರ್ಧರಿಸಬೇಕು,ಜೊತೆಗೆ ಮನೆಯಲ್ಲಿಯೇ ಸುರಕ್ಷಿತ ಉಪಚಾರ ಪಡೆಯುವ ಬಗ್ಗೆ ಮಾಹಿತಿಗಳನ್ನು ಒದಗಿಸಬೇಕು. ಇಂತಹ ಮಾಹಿತಿಗಳನ್ನು ಹಾಟ್ ಲೈನ್ ಗಳು ಅಥವಾ ಡ್ಯಾಷ್ ಬೋರ್ಡ್ ಗಳ ಮೂಲಕವೂ ಲಭ್ಯವಾಗಿಸಬೇಕು ಎಂದು ಅವರು ಹೇಳಿದರು.