ನವದೆಹಲಿ : ಕೊರೊನಾ ವೈರಸ್ ಲಸಿಕೆಗಳ ರಫ್ತಿನ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. 80ಕ್ಕೂ ಅಧಿಕ ದೇಶಗಳಿಗೆ ಇದುವರೆಗೂ 640 ಲಕ್ಷ ಡೋಸ್‌ಗಳಿಗಿಂತಲೂ ಹೆಚ್ಚು ಲಸಿಕೆಗಳನ್ನು ಪೂರೈಕೆ ಮಾಡುವಲ್ಲಿ ಭಾರತ ಮುಂಚೂಣಿಯ ಹೆಜ್ಜೆ ಇರಿಸಿದೆ ಎಂದು ಅದು ತಿಳಿಸಿದೆ.
ವಿದೇಶಗಳಿಗೆ ಲಸಿಕೆ ಪೂರೈಕೆ ಮಾಡುವ 'ವ್ಯಾಕ್ಸಿನ್ ಮೈತ್ರಿ' ಯೋಜನೆಯು ಬಹಳ ಯಶಸ್ವಿಯಾಗಿದ್ದು, ಜಗತ್ತಿನ ಮಿತ್ರ ದೇಶಗಳು ಅದನ್ನು ಮೆಚ್ಚಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
'ಈ ದಿನದವರೆಗೆ 'ವ್ಯಾಕ್ಸಿನ್ ಮೈತ್ರಿ' ಯೋಜನೆಯಡಿ ನಾವು ಜಾಗತಿಕ ಸಮುದಾಯಕ್ಕೆ ಸುಮಾರು 644 ಲಕ್ಷ ಡೋಸ್ ಲಸಿಕೆಗಳನ್ನು ಪೂರೈಸಿದ್ದೇವೆ. ಇದರಲ್ಲಿ 104 ಲಕ್ಷ ಡೋಸ್ ಲಸಿಕೆಗಳನ್ನು ಅನುದಾನವಾಗಿ 357 ಲಕ್ಷ ಡೋಸ್ ಲಸಿಕೆಗಳನ್ನು ವಾಣಿಜ್ಯ ಆಧಾರದಲ್ಲಿ ಮತ್ತು 182 ಲಕ್ಷ ಡೋಸ್‌ಗಳನ್ನು ಕೋವ್ಯಾಕ್ಸ್ ಯೋಜನೆಯಡಿ ಪೂರೈಕೆ ಮಾಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ನೇಪಾಳವು ಐದು ಮಿಲಿಯನ್ ಡೋಸ್ ಲಸಿಕೆ ಖರೀದಿಗಾಗಿ ಬೇಡಿಕೆ ಇರಿಸಿದೆ. ಇದಕ್ಕೆ ಭಾರತದಿಂದ ಪ್ರತಿಕ್ರಿಯೆ ಬಂದಿಲ್ಲ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಂತರಿಕ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ವಿದೇಶಿ ಪೂರೈಕೆಯನ್ನು ನಡೆಸಲಾಗುತ್ತಿದೆ. ನಾವು ರಫ್ತು ನಿಷೇಧವನ್ನು ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.