ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಅನಿಯಂತ್ರಿತವಾಗಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಚಟುವಟಿಕೆಗಳನ್ನು ಚುರುಗೊಳಿಸಿರುವುದಾಗಿ ಜಿಲ್ಲಾ ಮಟ್ಟದ ಐ.ಇ.ಸಿ. ಕೋವಿಡ್-19 ಸಂಚಲನ ಸಮಿತಿ ತಿಳಿಸಿದೆ.
ಕಾಸರಗೋಡು ನಗರದ ಹೋಟೆಲ್ ಗಳು, ಹಣ್ಣು-ತರಕಾರಿ ಅಂಗಡಿಗಳು, ಮೀನು ಮಾರುಕಟ್ಟೆಗಳು, ಶಾಪಿಂಗ್ ಸೆಂಟರ್ ಗಳು ಇತ್ಯಾದಿಗಳಲ್ಲಿ ಕೋವಿಡ್-19 ಸಂಹಿತೆಗಳ ಕುರಿತು ಜನಜಾಗೃತಿ ಚಟುವಟಿಕೆ ನಡೆಸಲಾಗುತ್ತಿದೆ. ಈ ಸಂಬಂಧ ಭಿತ್ತಿಪತ್ರ ಲಗತ್ತಿಸಲಾಗಿದೆ. ಜಿಲ್ಲಾ ಎಜುಕೇಷನ್ ಆಂಡ್ ಮೀಡಿಯಾ ಅಧಿಕಾರಿಅಬ್ದುಲ್ ಲತೀಊಫ್ ಮಠತ್ತಿಲ್, ಸಾಮಾಜಿಕ ಆರೋಗ್ಯ ಕೇಂದ್ರ ಆರೋಗ್ಯ ಸೂಪರ್ ವೈಸರ್ ಎ.ಕೆ.ಹರಿದಾಸ್, ಕಾಸರಗೋಡು ಜನರಲ್ ಆಸ್ಪತ್ರೆ ಜೂನಿಯರ್ ಆರೋಗ್ಯ ಇನ್ಸ್ ಪೆಕ್ಟರ್ ಶ್ರೀಜಿತ್, ರಾಷ್ಟ್ರೀಯ ಆರೋಗ್ಯ ದೌತ್ಯ ಜ್ಯೂನಿಯರ್ ಕನ್ಸಲ್ಟೆಂಟ್ ಕಮಲ್ ಕೆ.ಜೋಸ್ ಮೊದಲಾದವರು ಜನಜಾಗೃತಿಗೆ ನೇತೃತ್ವ ವಹಿಸಿದ್ದಾರೆ.
ಕಾಸರಗೊಡು ಸಿವಿಲ್ ಸ್ಟೇಶನ್ ಕಚೇರಿಗಳಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಇರಿಸಲಾದ ಆಸನಗಳನ್ನು ಸಾಮಾಜಿಕ ಅಂತರದೊಂದಿಗೆ ಪುನರ್ ಸ್ಥಾಪಿಸಲಾಗಿದೆ. ಜನಜಾಗೃತಿ ಸ್ಟಿಕರ್ ಲಗತ್ತಿಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸಮಾರಂಭದಲ್ಲಿ ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸವಾಮಿನಾಥನ್ ಸ್ಟಿಕರ್ ಬಿಡುಗಡೆಗೊಳಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಸಹಾಯಕ ಸಂಪಾದಕ ಪಿ.ಪಿ.ವಿನೀಷ್, ಜಿಲ್ಲಾ ಎಜುಕೇಷನ್ ಆಂಡ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ರಾಷ್ಟ್ರೀಯ ಆರೋಗ್ಯ ದೌತ್ಯ ಜ್ಯೂನಿಯರ್ ಕನ್ಸಲ್ಟೆಂಟ್ ಕಮಲ್ ಕೆ. ಜೋಸ್ ಮೊದಲಾದವರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಧಾನ ನಗರಗಲಲ್ಲಿ, ಕಚೇರಿಗಳಲ್ಲಿ ಮೊದಲಾದೆಡೆ ಇಂಥಾ ಜನಜಾಗೃತಿ ಚಟುವಟಿಕೆ ನಡೆಸಲಾಗುವುದು ಎಂದು ಜಿಲ್ಲಾ ವೈದ್ಯಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು.