ನವದೆಹಲಿ: ಛತ್ತೀಸ್ ಗಢದಲ್ಲಿ ಕೋವಿಡ್-19 ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ದೇಶದಲ್ಲಿ ಕಳೆದ ಬಾರಿಗಿಂತಲೂ ವೇಗವಾಗಿ ಸೋಂಕು ಹರಡುತ್ತಿರುವುದನ್ನು ಮಂಗಳವಾರ ಖಚಿತಪಡಿಸಿದೆ.
ಸಾಂಕ್ರಾಮಿಕ ಕಾಣಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ನಿನ್ನೆ ಒಂದೇ ದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯ ಅಧಿಕಾರಿಗಳು, ಕೋವಿಡ್ -19 ಪ್ರಕರಣಗಳು ಹೆಚ್ಚಿರುವ 10 ಜಿಲ್ಲೆಗಳ ಪೈಕಿ ಛತ್ತೀಸ್ ಗಢದ ದುರ್ಗ್ ಒಂದಾಗಿದೆ. ಮಹಾರಾಷ್ಟ್ರದಲ್ಲಿನ ಏಳು ಹಾಗೂ ಕರ್ನಾಟಕದ ಒಂದು ಜಿಲ್ಲೆಯೂ ಸೇರಿದೆ. ಕೋವಿಡ್-19 ಸಾಂಕ್ರಮಿಕ ದೇಶದಲ್ಲಿ ತೀವ್ರಗೊಳ್ಳುತ್ತಿದ್ದು, ಕಳೆದ ವರ್ಷಕ್ಕಿಂತಲೂ ವೇಗವಾಗಿ ಹರಡುತ್ತಿದೆ ಎಂದು ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ ಗಢ ಜಿಲ್ಲೆಯಲ್ಲಿ ಕೋವಿಡ್-19 ದೈನಂದಿನ ಪ್ರಕರಣಗಳು ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಆತಂಕ ಮೂಡಿಸಿದೆ. ಮುಂದಿನ ನಾಲ್ಕು ವಾರಗಳು ಅತ್ಯಂತ ಅಪಾಯಕಾರಿಯಾಗಿ ಇರಲಿವೆ. ಇಡೀ ದೇಶ ಒಟ್ಟಾಗಿ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ ಬಗ್ಗೆ ಸಮಗ್ರ ವಿವರ ನೀಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿಡ್-19 ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವ 10 ಜಿಲ್ಲೆಗಳ ಪೈಕಿಯಲ್ಲಿ ಪುಣೆ, ಮುಂಬೈ, ಥಾಣೆ, ನಾಗ್ಪುರ, ನಾಸಿಕ್, ಬೆಂಗಳೂರು ನಗರ, ಔರಂಗಬಾದ್, ಅಹ್ಮದ್ ನಗರ, ದೆಹಲಿ ಮತ್ತು ದುರ್ಗಾ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದಾಗಿ ತಿಳಿಸಿದರು.
ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಪಂಜಾಬ್ ನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವ ಜಿಲ್ಲೆಗಳಲ್ಲಿ 50 ಉನ್ನತ ಮಟ್ಟದ ಬಹು ಶಿಸ್ತೀಯ ಸಾರ್ವಜನಿಕ ಆರೋಗ್ಯ ತಂಡವನ್ನು ಕೇಂದ್ರ ಸರ್ಕಾರದಿಂದ ನಿಯೋಜಿಸಲಾಗಿದೆ. ಆರ್ ಟಿ- ಪಿಸಿಆರ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದರು.