ನವದೆಹಲಿ: ಕೋವಿಡ್-19 ಕರ್ತವ್ಯದ ವೇಳೆ ಸಾವಿಗೀಡಾಗುವ ಆರೋಗ್ಯ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಘೋಷಿಸಲಾಗಿದ್ದ ₹50 ಲಕ್ಷ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ ಒಂದು ವರ್ಷದವರೆಗೆ ವಿಸ್ತರಿಸಿದೆ.
ಕರ್ತವ್ಯದ ವೇಳೆ ಮೃತಪಟ್ಟ ಕೊರೊನಾ ಯೋಧರನ್ನು ಅವಲಂಬಿಸಿರುವವರಿಗೆ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ)' ಸುರಕ್ಷತೆ ಒದಗಿಸಿದೆ. ಈ ಯೋಜನೆಯು ಇಂದಿನಿಂದ ಅನ್ವಯವಾಗುವಂತೆ ಒಂದು ವರ್ಷದ ವರೆಗೆ ವಿಸ್ತರಿಸಲಾಗಿದೆ ಎಂದು ಈ ಮೂಲಕ ತಿಳಿಸಲು ಸಂತೋಷವಾಗುತ್ತಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಮಂಗಳವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಹಾಲಿ ವಿಮೆ ಯೋಜನೆ ಅವಧಿಯು ಏಪ್ರಿಲ್ 24ಕ್ಕೆ ಕೊನೆಗೊಳ್ಳಲಿದೆ. ಬಳಿಕ ಯೋಜನೆಯನ್ನು ಮುಂದುವರಿಸುವುದಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದರು. ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ವಿಮೆ ಅವಧಿಯನ್ನು ಮುಂದುವರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.
ಕೋವಿಡ್ ಯೋಧರನ್ನು ಅವಲಂಬಿಸಿರುವವರನ್ನು ಗಮನದಲ್ಲಿಟ್ಟುಕೊಂಡು 2020ರ ಮಾರ್ಚ್ 30ರಂದು ವಿಮಾ ಯೋಜನೆ ಆರಂಭಿಸಲಾಗಿತ್ತು. ಆರಂಭದಲ್ಲಿ 90 ದಿನಗಳ ಅವಧಿಗೆ ಸೀಮಿತವಾಗಿದ್ದ ಯೋಜನೆಯನ್ನು ಬಳಿಕ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿತ್ತು.