ನವದೆಹಲಿ: ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳು ಪ್ರಸ್ತುತ ಸರ್ಕಾರದಿಂದ ಕೋವಿಡ್ ಲಸಿಕೆ ಪಡೆದು ಪ್ರತಿ ಡೋಸ್ ಗೆ 250 ರೂಪಾಯಿಯಂತೆ ದರ ನಿಗದಿಪಡಿಸುತ್ತಿದೆ. ಆದರೆ ಮೇ 1ರಿಂದ ಖಾಸಗಿ ಕೋವಿಡ್-19 ಕೇಂದ್ರಗಳು ಲಸಿಕೆ ತಯಾರಕರಿಂದ ನೇರವಾಗಿ ಲಸಿಕೆಗಳನ್ನು ಪಡೆಯಬಹುದಾಗಿದೆ.
ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯತಂತ್ರ ಪ್ರಕಾರ, ಕೇಂದ್ರ ಸರ್ಕಾರ ನೀಡುವ ಕೋವಿಡ್ -19 ಲಸಿಕೆ ಆರೋಗ್ಯ ವಲಯದಲ್ಲಿ ಕೆಲಸ ಮಾಡುವವರಿಗೆ, ಕೋವಿಡ್ ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷಕ್ಕೆ ಮೇಲ್ಪಟ್ಟವರಿಗೆ ಉಚಿತವಾಗಿ ದೊರಕುತ್ತಿದ್ದು, ಇನ್ನು ಮುಂದೆ ಸಹ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಉಚಿತ ಲಸಿಕೆ ದೊರೆಯುವ ಸೌಲಭ್ಯ ಮುಂದುವರಿಯುತ್ತದೆ.
ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಎಲ್ಲರೂ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಮೊನ್ನೆ ಆದೇಶ ಹೊರಡಿಸಿದ್ದು, ಲಸಿಕೆ ತಯಾರಕರು ಮೇ 1 ರ ಮೊದಲು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವ ಶೇಕಡಾ 50ರಷ್ಟು ಲಸಿಕೆಗಳಿಗೆ ದರವನ್ನು ಘೋಷಣೆ ಮಾಡಲಿದೆ.
ಲಸಿಕೆ ಉತ್ಪಾದಕರು ನಿಗದಿಪಡಿಸುವ ದರಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ವಸಾಹತುಶಾಹಿಗಳು ತಯಾರಕರಿಂದ ಲಸಿಕೆಗಳನ್ನು ಪಡೆಯಬಹುದಾಗಿದೆ.
ಖಾಸಗಿ ಆಸ್ಪತ್ರೆಗಳು ಶೇಕಡಾ 50ರಷ್ಟು ಲಸಿಕೆಗಳನ್ನು ಮಾತ್ರ ಉತ್ಪಾದಕರಿಂದ ಪಡೆಯಬಹುದಾಗಿದೆ. ನಂತರ ಅವರು ನಿಗದಿಪಡಿಸುವ ದರದ ಮೇಲೆ ಸರ್ಕಾರ ನಿಗಾವಹಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದರ ಜೊತೆಗೆ ಈಗ ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳ ಡೋಸ್ ವಿತರಣಾ ಕೇಂದ್ರಗಳು ಸರ್ಕಾರದಿಂದ ಪಡೆಯುವ ಡೋಸ್ ಗೆ 250 ರೂಪಾಯಿ ನಿಗದಿಪಡಿಸುವ ದರವನ್ನು ತೆಗೆದುಹಾಕಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್-19 ಲಸಿಕೆ ಭಾರತ ಸರ್ಕಾರದಿಂದ ಲಸಿಕೆ ಪ್ರಮಾಣವನ್ನು ಪಡೆಯುವ ಎಲ್ಲ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಅರ್ಹ ಜನರಿಗೆ ಉಚಿತವಾಗಿ ನೀಡುವ ಪ್ರಕ್ರಿಯೆ ಮುಂದುವರಿಯುತ್ತದೆ.