ಕಾಸರಗೋಡು : ಆರೋಗ್ಯ ಸಂರಕ್ಷನೆಗಾಗಿ ತ್ಯಾಜ್ಯ ಮುಕ್ತ ನಾಡು ಎಂಬ ಉದ್ದೇಶದಿಂದ ಹರಿತ ಕೇರಳಂ ಮಿಷನ್ ಜಿಲ್ಲಾ ಪಂಚಾಯತ್ ನ ನೇತೃತ್ವದಲ್ಲಿ ಒಂದು ವಾರಗಳ ಕಾಲ ಜಾರಿಗೊಳಿಸುವ "ಒಗ್ಗಟ್ಟಿನಿಂದ ಸಿದ್ಧಪಡಿಸೋಣ ಶುಚಿಯಾದ ನಾಡು ಮತ್ತು ಮನೆ" ಎಂಬ ಶಿಬಿರ ಮೇ 1ರಂದು ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ.
ಮಳೆಗಾಲ ಅಂಟುರೋಗಳನ್ನು ತಡೆಯುವ, ಕೋವಿಡ್ ಸೋಂಕು ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ಗುರಿಯಿರಿಸಿ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು, ಸಿಬ್ಬಂದಿ, ಸ್ವಯಂಸೇವಾ ಸಂಘಟನೆಗಳು, ಗ್ರಂಥಾಲಯಗಳು, ಕ್ಲಬ್ ಗಳು, ಕುಟುಂಬಶ್ರೀ, ನೌಕರಿ ಖಾತರಿ ಯೋಜನೆ, ಹರಿತ ಕ್ರಿಯಾ ಸೇನೆ ಕಾರ್ಯಕರ್ತರು, ಸಾರ್ವಜನಿಕರು ಮೊದಲಾದವರ ಭಾಗವಹಿಸುವಿಕೆಯೊಂದಿಗೆ ಶಿಬಿರ ಜರುಗಲಿದೆ.
ವಿವಿಧ ವಲಯಗಳನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸುವ ಯೋಜನೆಗಳನ್ನು ರಚಿಸಲಾಗಿದೆ. ಮನೆಗಳ ಶುಚೀಕರಣ, ಸಾರ್ವಜನಿಕ ಪ್ರದೇಶಗಳ ಪ್ಲಾಸ್ಟಿಕ್ ತ್ಯಾಜ್ಯ ತೆರವು, ಸಾರ್ವಜನಿಕ-ಖಾಸಗಿ ಸಂಸ್ಥೆಗಳ ಶುಚೀಕರಣ, ಸಾರ್ವಜನಿಕ ಮಾರ್ಗಗಳ ಶುಚೀಕರಣ ಇತ್ಯಾದಿಗಳನ್ನು ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ನಡೆಸಲಾಗುವುದು.
ಈ ಸಂಬಂಧ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಬೆಯಲ್ಲಿ ಜಿಲ್ಲಾ ಪಂಚಾಯತ್, ನಗರಸಭೆಗಳ, ಬ್ಲೋಕ್ ಪಂಚಾಯತ್ ಗಳ, ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಜಿಲ್ಲಾ ಮಟ್ಟದ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.