ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಕೋವಿಡ್ ಲಸಿಕೆ ಹಾಕುವ ಕೇಂದ್ರ ಸರ್ಕಾರದ ಉದ್ದೇಶಿತ ಅಭಿಯಾನ ಬಹುತೇಕ ರಾಜ್ಯಗಳಲ್ಲಿ ನಾಳೆ ಆರಂಭವಾಗುವುದು ಸಂಶಯವಾಗಿದೆ.
ಬಹುತೇಕ ರಾಜ್ಯಗಳಲ್ಲಿ ಲಸಿಕೆ ಸಂಗ್ರಹದ ಕೊರತೆಯಿದ್ದು ಅಭಿಯಾನ ಇನ್ನಷ್ಟು ತಿಂಗಳು ಮುಂದೆ ಹೋದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಪಂಜಾಬ್, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳು ವಾರಾನುಗಟ್ಟಲೆ-ತಿಂಗಳುಗಟ್ಟಲೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಧ್ಯ ಪ್ರದೇಶ ಮತ್ತು ತಮಿಳು ನಾಡು ರಾಜ್ಯಗಳು ಈಗಾಗಲೇ ಆರಂಭಿಸಿರುವ ಅಭಿಯಾನವನ್ನು ಪೂರೈಸಲು ಹೆಣಗಾಡುತ್ತಿವೆ. ಇಲ್ಲಿ ಕೂಡ ಲಸಿಕೆ ಸಿಗುವ ಬಗ್ಗೆ ಗೊಂದಲವಿದೆ. ಈಗ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನ ಪೂರ್ಣಗೊಂಡ ಬಳಿಕವೇ 18ರಿಂದ 45 ವರ್ಷದವರೆಗಿನವರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆಯಷ್ಟೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಈಗಾಗಲೇ ತಿಳಿಸಿದ್ದಾರೆ.ಅವರು ಹೇಳಿದಂತೆ ಆದರೆ, ಆಂಧ್ರ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಸಿಗಲು ಸೆಪ್ಟೆಂಬರ್ ತಿಂಗಳಾಗಬಹುದು.
ಕೇರಳದಲ್ಲಿ ಎಲ್ಲೂ ಮುಟ್ಟಿಲ್ಲ!:
ಸರ್ಕಾರದ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಹಿರಿಯರಿಗೆ ಸದ್ಯ ಲಸಿಕೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕೊರೋನಾ ಲಸಿಕೆ ಬಂದರೆ 45 ವರ್ಷಕ್ಕಿಂತ ಕೆಳಗಿನವರಿಗೂ ಲಸಿಕೆ ನೀಡುವ ಬಗ್ಗೆ ವ್ಯವಸ್ಥೆ ಮಾಡಬಹುದು. ಆದರೆ ಸದ್ಯಕ್ಕೆ ಆ ಪರಿಸ್ಥಿತಿಯಿಲ್ಲ ಎಂದು ಕೋವಿಡ್-19 ಕಾರ್ಯಪಡೆಯ ಕೋರ್ ಸಮಿತಿ ಸದಸ್ಯರೊಬ್ಬರು ಹೇಳುತ್ತಾರೆ. ತೆಲಂಗಾಣ ರಾಜ್ಯದಲ್ಲಿ ಕೂಡ ನಾಳೆ ಆರಂಭವಾಗುವುದು ಸಂಶಯವೇ.
ಕರ್ನಾಟಕದಲ್ಲಿ ಏನು ಪರಿಸ್ಥಿತಿ: ಸೆರಂ ಇನ್ಸ್ಟಿಟ್ಯೂಟ್ ಗೆ ನಾವು ಲಸಿಕೆಗೆ ಆದೇಶ ನೀಡಿದ್ದು ಅವರು ಅಲ್ಲಿಂದ ಯಾವಾಗ ಕಳುಹಿಸುತ್ತಾರೆ ಎಂದು ಗೊತ್ತಿಲ್ಲ, ನಮಗೆ ಅಲ್ಲಿಂದ ಮಾಹಿತಿ ಬಂದಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಹೇಳುತ್ತಾರೆ.
ಲಸಿಕಾ ಅಭಿಯಾನವನ್ನು ನಾಳೆ 18 ವರ್ಷ ಮೇಲ್ಪಟ್ಟವರಿಗೆ ಆರಂಭಿಸಲು ಯೋಜನೆ ರೂಪಿಸಲು ಉನ್ನತ ಮಟ್ಟದ ಸಮಿತಿ ಕೆಲಸ ಮಾಡುತ್ತಿದೆ. 1.5 ಕೋಟಿ ಡೋಸ್ ಕೋವಿಡ್-19 ಲಸಿಕೆ ಸಂಗ್ರಹಕ್ಕೆ ನಾವು ಆರ್ಡರ್ ಕೊಟ್ಟಿದ್ದೇವೆ. ಸದ್ಯ ರಾಜ್ಯದಲ್ಲಿ 5.83 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 1.74 ಲಕ್ಷ ಡೋಸ್ ಕೊವಾಕ್ಸಿನ್ ಲಸಿಕೆ ಸಂಗ್ರಹವಿದೆ ಎಂದು ತಮಿಳು ನಾಡು ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಡಾ ಟಿ ಎಸ್ ಸೆಲ್ವವಿನಾಯಕಂ ತಿಳಿಸಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ಕೂಡ ನಾಳೆ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಅಭಿಯಾನ ಆರಂಭವಾಗುವುದು ಸಂಶಯವೇ. ಅಲ್ಲಿ ಕೂಡ ಸಾಕಷ್ಟು ಲಸಿಕೆ ಸಂಗ್ರಹವಿಲ್ಲ. ಮೊನ್ನೆ ಬುಧವಾರ 2 ಲಕ್ಷ ಡೋಸ್ ಲಸಿಕೆ ಬಂದಿದ್ದು ಅದಕ್ಕೂ ಮುನ್ನ 1.5 ಲಕ್ಷ ಡೋಸ್ ಬಂದಿದೆ. ನಮಗೆ ಕನಿಷ್ಠ 10 ಲಕ್ಷ ಡೋಸ್ ಲಸಿಕೆ ಬಂದರೆ ನಾಳೆ ಆರಂಭಿಸಬಹುದು ಎಂದು ಪಂಜಾಬ್ ಆರೋಗ್ಯ ಸಚಿವ ಬಲ್ಬಿರ್ ಸಿಂಗ್ ಹೇಳುತ್ತಾರೆ.
ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಆರಂಭದ ನಿರೀಕ್ಷೆ: ಇನ್ನು ಕೆಲ ದಿನಗಳಲ್ಲಿ ಭಾರತ್ ಬಯೋಟೆಕ್ ನಿಂದ ಕನಿಷ್ಠ 1 ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ಬರಬಹುದು ಎಂಬ ನಿರೀಕ್ಷೆಯಿದೆ. ನಾಳೆ ಮತ್ತು ನಾಡಿದ್ದು ಸರ್ಕಾರಿ ರಜೆ ಇರುವುದರಿಂದ ಲಸಿಕಾ ಅಭಿಯಾನ ಇರುವುದಿಲ್ಲ, ನಾಡಿದ್ದು ಸೋಮವಾರ ಮೇ 3ರಂದು ನಿರೀಕ್ಷಿತ ಡೋಸ್ ಲಸಿಕೆ ಬಂದರೆ ಒಡಿಶಾದಲ್ಲಿ ಆರಂಭಿಸುವುದಾಗಿ ಒಡಿಶಾ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ ಕೆ ಮೊಹಪಾತ್ರ ಹೇಳುತ್ತಾರೆ.
ನಿರೀಕ್ಷಿತ ಡೋಸ್ ಲಸಿಕೆ ಬರುವ ಸಾಧ್ಯತೆಯಿದ್ದು ಮೇ 3ಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಮಧ್ಯ ಪ್ರದೇಶದಲ್ಲಿ ಅಭಿಯಾನ ಆರಂಭವಾಗುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳದಲ್ಲಿ ಮೇ 5ರಂದು 18 ವರ್ಷ ಮೇಲ್ಪಟ್ಟವರಿಗೆ ಅಭಿಯಾನ ಆರಂಭವಾಗುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಉತ್ಪಾದಕರಿಂದ ಲಸಿಕೆ ಪೂರೈಕೆಯಾಗುತ್ತಿದ್ದಂತೆ ಅರ್ಹರೆಲ್ಲರಿಗೂ ನಾವು ಲಸಿಕೆ ನೀಡುತ್ತಾ ಹೋಗುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಮಧ್ಯೆ, 18ರಿಂದ 44 ವರ್ಷದೊಳಗಿನ 2.15 ಕೋಟಿ ಮಂದಿ ಕೋವಿನ್ ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.