ನವದೆಹಲಿ: ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ಮೇ 1 ರಂದು ಭಾರತಕ್ಕೆ ಬರಲಿದೆ ಎಂದು ರಷ್ಯಾ ರಾಯಭಾರ ಕಚೇರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬುಧವಾರ ಖಚಿತಪಡಿಸಿದೆ.
ರಷ್ಯಾ ಡೈರೆಕ್ಟ್ ಇನ್ ವೆಸ್ಟ್ ಮೆಂಟ್ ಫಂಡ್(ಆರ್ ಡಿಐಎಫ್)ನ ಸಿಇಒ ಶ್ರೀ ಕಿರಿಲ್ ಡಿಮಿಟ್ರಿವ್ ಅವರ ಪ್ರಕಾರ, ಸ್ಪುಟ್ನಿಕ್ ವಿ ಯ ಮೊದಲ ಬ್ಯಾಚ್ ಅನ್ನು ಮೇ 1, 2021 ರಂದು ಭಾರತಕ್ಕೆ ತಲುಪಿಸಲಾಗುವುದು ಎಂದು ರಷ್ಯಾದ ರಾಯಭಾರ ಕಚೇರಿಯು ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.
ಆದರೂ, ಭಾರತಕ್ಕೆ ನೀಡುವ ಸ್ಪುಟ್ನಿಕ್ ವಿ ಡೋಸೇಜ್‌ಗಳ ಸಂಖ್ಯೆಯ ಬಗ್ಗೆ ಯಾವುದೇ ವಿವರಗಳು ತಮ್ಮ ಬಳಿ ಇಲ್ಲ ಎಂದು ಹೇಳಿದ್ದು, ಭಾರತಕ್ಕೆ ಲಸಿಕೆ ಪ್ರಮಾಣಗಳ ಸಂಗ್ರಹದ ವಿವರಗಳನ್ನು ನಂತರ ನವೀಕರಿಸಲಾಗುತ್ತದೆ ಎನ್ನಲಾಗಿದೆ.
ಭಾರತೀಯ ಔಷಧ ಮಹಾ ನಿಯಂತ್ರಣಾಲಯ ತಜ್ಞರ ಸಮಿತಿ ಸ್ಪಟ್ನಿಕ್ -ವಿ ಲಸಿಕೆಯ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳನ್ನು ವರದಿಯನ್ನು ಪರಿಶೀಲಿಸಿ ಅಂತಿಮವಾಗಿ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ವಿರುದ್ದದ ಹೋರಾಟಕ್ಕೆ ನೀಡಲಾಗುತ್ತಿರುವ ಮೂರನೇ ಲಸಿಕೆ ಇದಾಗಿದ್ದು, ಇದು ಶೇ. 90 ರಷ್ಟು ಪರಿಣಾಮಕಾರಿಯಾಗಿದೆ.
ಈಗಾಗಲೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನಕಾ ಅಭಿವೃದ್ಧಿ ಪಡಿಸಿರುವ 'ಕೋವಿಶೀಲ್ಡ್', ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಭಾರತ್ ಬಯೋಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ 'ಕೋವಾಕ್ಸಿನ್' ಲಸಿಕೆ ದೇಶದಲ್ಲಿ ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿದೆ.
2020ರ ಸೆಪ್ಟೆಂಬರ್ ನಲ್ಲಿ ಡಾ. ರೆಡ್ಡೀಸ್ ಪ್ರಯಾಗಾಲಯ ರಷ್ಯಾದ ನೇರ ಹೂಡಿಕೆ ನಿಧಿ ಅಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್- ವಿ ಲಸಿಕೆಯನ್ನು ದೇಶದಲ್ಲಿ ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ಅದರ ಸಮಗ್ರ ಮಾಹಿತಿಯನ್ನು ತಜ್ಞರ ಸಮಿತಿ ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.