ನವದೆಹಲಿ : ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳನ್ನು ಎರಡೂವರೆ-ಮೂರು ತಿಂಗಳ ಅಂತರದಲ್ಲಿ ತೆಗೆದುಕೊಂಡರೆ ಅದು ಶೇ 90ರಷ್ಟು ಪರಿಣಾಮಕಾರಿಯಾಗುತ್ತದೆ ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಲ್ಲಾ ತಿಳಿಸಿದ್ದಾರೆ.
ಭಾರತದಲ್ಲಿ ಪ್ರಸ್ತುತ ಲಸಿಕೆಯ ಎರಡು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತಿದೆ. ಆದರೆ ಈ ವರ್ಷದ ಆರಂಭದಲ್ಲಿ ದಿ ಲ್ಯಾನ್ಸೆಂಟ್ ಪ್ರಕಟಿಸಿದ್ದ ಅಧ್ಯಯನ ವರದಿಯಲ್ಲಿ, ಆಸ್ಟ್ರಾಜೆನಿಕಾ ಔಷದ ಸಂಸ್ಥೆಯು ಆಕ್ಸ್‌ಫರ್ಡ್ ವಿವಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಈ ಲಸಿಕೆಯನ್ನು ಒಂದು ತಿಂಗಳ ಅಂತರದಲ್ಲಿ ಎರಡು ಡೋಸ್ ಪಡೆದರೆ ಶೇ 70ರಷ್ಟು ಪರಿಣಾಮಕಾರಿಯಾಗುತ್ತದೆ ಎಂದು ತಿಳಿಸಿತ್ತು.
'ಪ್ರಯೋಗದ ಒಂದು ಭಾಗದಲ್ಲಿ ಒಂದು ತಿಂಗಳ ಅಂತರದಲ್ಲಿ ನೀಡಿದ ಎರಡು ಡೋಸ್‌ಗಳು ಶೇ 60-70ರಷ್ಟು ಪರಿಣಾಮಕಾರಿ ಎನಿಸಿದ್ದವು. ಮತ್ತೊಂದು ಗುಂಪಿನ ಕೆಲವು ಸಾವಿರ ರೋಗಿಗಳಿಗೆ ಎರಡು ಡೋಸ್‌ಗಳನ್ನು 2-3 ತಿಂಗಳ ಅಂತರದಲ್ಲಿ ನೀಡಲಾಗಿದೆ. ಅವರಲ್ಲಿ ಅದು ಶೇ 90ರಷ್ಟು ಪರಿಣಾಮಕಾರಿಯಾಗಿ ಕಂಡುಬಂದಿದೆ' ಎಂದು ಆದಾರ್ ಹೇಳಿದ್ದಾರೆ.
'ನೀವು ಇತರೆ ಲಸಿಕೆಗಳ ವರದಿಗಳನ್ನು ಗಮನಿಸಿದಾಗಲೂ, ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿದ್ದಷ್ಟೂ ಅದರ ದಕ್ಷತೆ ಹೆಚ್ಚಿರುವುದು ತಿಳಿಯುತ್ತದೆ' ಎಂದು ತಿಳಿಸಿದ್ದಾರೆ.
ಕೋವಿಶೀಲ್ಡ್‌ನ ಮೊದಲ ಹಾಗೂ ಎರಡನೆಯ ಡೋಸ್‌ಗಳ ನಡುವಿನ ಅಂತರವನ್ನು ಲಸಿಕೆ ನೀಡುವಿಕೆಯ ರಾಷ್ಟ್ರೀಯ ಪರಿಣತರ ಗುಂಪಿನ ಶಿಫಾರಸಿನಂತೆ ಕಳೆದ ತಿಂಗಳು ಎಂಟು ವಾರಗಳಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿತ್ತು.
ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ಒಂದು ತಿಂಗಳ ಬಳಿಕ ದೇಹದಲ್ಲಿ ಪ್ರತಿರಕ್ಷಣಾ ಶಕ್ತಿ ತೀವ್ರಗೊಳ್ಳುತ್ತದೆ. 50 ವರ್ಷದೊಳಗಿನವರಲ್ಲಿ ಒಂದು ಡೋಸ್‌ನಲ್ಲಿಯೇ ಅದ್ಭುತ ಪ್ರತಿಕ್ರಿಯೆಯನ್ನು ಗಮನಿಸಿದ್ದೇವೆ. ಒಂದು ತಿಂಗಳ ಬಳಿಕ ಮತ್ತೂ ಒಂದು ಡೋಸ್ ಪಡೆದುಕೊಂಡರೆ ಅತ್ಯುತ್ತಮ ರಕ್ಷಣೆ ಸಿಗುತ್ತದೆ. ಕೋವಿಡ್ 19ರಿಂದ ಚೇತರಿಸಿಕೊಂಡ ರೋಗಿಗಳಿಗಿಂತಲೂ ಇದು ಹೆಚ್ಚಿರುತ್ತದೆ ಒಂದು ಡೋಸ್‌ನಿಂದ ಶೇ 70ರಷ್ಟು ಜನರು ಸಂಪೂರ್ಣವಾಗಿ ರಕ್ಷಣೆ ಪಡೆಯುತ್ತಾರೆ. ಆದರೆ ಎರಡನೆಯ ಡೋಸ್ ಪಡೆದರೆ ದೀರ್ಘಾವಧಿ ಪ್ರತಿರಕ್ಷಣಾ ಸಾಮರ್ಥ್ಯ ಸಿಗುತ್ತದೆ ಎಂದು ಆದಾರ್ ಹೇಳಿದ್ದಾರೆ.