ನವದೆಹಲಿ: ಸೆಪ್ಟೆಂಬರ್ ವೇಳೆಗೆ ಕೋವಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಾಗಲಿದೆ. ಕೋವಿಡ್ 19 ವಿರುದ್ಧದ ಔಷಧ ರೆಮ್‌ಡೆಸಿವಿರ್ ತಯಾರಿಕೆಯನ್ನು ಮೇ ವೇಳೆಗೆ ಪ್ರತಿ ತಿಂಗಳಿಗೆ 74.1 ಲಕ್ಷಕ್ಕೆ ದ್ವಿಗುಣಗೊಳಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಭಾನುವಾರ ಹೇಳಿದ್ದಾರೆ.
ಕೋವಿಡ್ ವಿರುದ್ಧ ಹೋರಾಡಲು ರಾಜ್ಯಗಳಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುತ್ತಿದೆ. ನಿರಂತರವಾಗಿ ಆಮ್ಲಜನಕದ ಪೂರೈಕೆ ಮತ್ತು ಆರೋಗ್ಯ ಮೂಲಸೌಕರ್ಯಗಳ ವರ್ಧನೆಯನ್ನು ಖಚಿತಪಡಿಸಲಾಗುತ್ತಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ.
ರಿಮೆಡೆಸಿವಿರ್ ಅಗತ್ಯವನ್ನು ಪೂರೈಸಲು ಕೈಗೊಂಡಿರುವ ಕ್ರಮಗಳನ್ನು ತಿಳಿಸಿದ ವರ್ಧನ್, "ಮೇ ವೇಳೆಗೆ ಉತ್ಪಾದನೆಯನ್ನು ತಿಂಗಳಿಗೆ 74.1 ಲೀಗೆ ದ್ವಿಗುಣಗೊಳಿಸಲಾಗುತ್ತಿದೆ. ಉತ್ಪಾದನೆಯನ್ನು ಹೆಚ್ಚಿಸಲು 20 ಉತ್ಪಾದನಾ ಘಟಕಗಳಿಗೆ ಎಕ್ಸ್‌ಪ್ರೆಸ್ ಅನುಮತಿ ನೀಡಲಾಗಿದೆ. ರಫ್ತು ನಿಷೇಧಿಸಲಾಗಿದ್ದು ಬೆಲೆಗಳನ್ನು ಇಳಿಸಲಾಗಿದೆ. ಕೊರೋನಾ ನಿಗ್ರಹಿಸಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಆಮ್ಲಜನಕದ ಪೂರೈಕೆಯ ವಿಷಯದಲ್ಲಿ ಅವರು ಮತ್ತೊಂದು ಟ್ವೀಟ್‌ನಲ್ಲಿ, 'ಆಮ್ಲಜನಕ ಕೊರತೆ ಎದುರಿಸುತ್ತಿರುವ ರಾಜ್ಯಗಳ ಬೇಡಿಕೆಗಳಿಗೆ ಅನುಗುಣವಾಗಿ ಸರಬರಾಜು ಮಾಡಲಾಗಿದೆ. ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ. ಕೈಗಾರಿಕಾ ಬಳಕೆಯ ಆಮ್ಲಜನಕವನ್ನು ವೈದ್ಯಕೀಯ ಬಳಕೆಗೆ ತಿರುಗಿಸಲಾಗುತ್ತದೆ. ದೇಶಾದ್ಯಂತ 162 ಪಿಎಸ್‌ಎ ಸ್ಥಾವರಗಳ ಸ್ಥಾಪನೆಯನ್ನು ಚುರುಕುಗೊಳಿಸುವುದು ಎಂದರು.
ದೇಶಾದ್ಯಂತ ದ್ರವ ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸಲು ಮುಂದಿನ ಕೆಲವು ದಿನಗಳಲ್ಲಿ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಗಳನ್ನು ಓಡಿಸಲು ರೈಲ್ವೆ ನಿರ್ಧರಿಸಿದ್ದರೆ, ಗೃಹ ಸಚಿವಾಲಯವು ಒಂಬತ್ತು ನಿರ್ದಿಷ್ಟ ಕೈಗಾರಿಕೆಗಳನ್ನು ಹೊರತುಪಡಿಸಿ ಕೈಗಾರಿಕಾ ಉದ್ದೇಶಗಳಿಗಾಗಿ ಆಮ್ಲಜನಕವನ್ನು ಪೂರೈಸುವುದನ್ನು ನಿಷೇಧಿಸಿದೆ.
ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಮತ್ತು ಕೇಂದ್ರ ಸಚಿವಾಲಯಗಳ ಅಡಿಯಲ್ಲಿರುವ ಆಸ್ಪತ್ರೆಗಳಲ್ಲಿ ವಾರ್ಡ್‌ಗಳನ್ನು ಮೀಸಲಿಡುವ ಮೂಲಕ ಕೋವಿಡ್ 19 ರೋಗಿಗಳ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. 'ಭಾರತ ಸರ್ಕಾರ ಮಹಾರಾಷ್ಟ್ರಕ್ಕೆ 1,121, ಉತ್ತರ ಪ್ರದೇಶಕ್ಕೆ 1,700, ಜಾರ್ಖಂಡ್‌ಗೆ 1,500, ಗುಜರಾತ್‌ಗೆ 1,600, ಮಧ್ಯಪ್ರದೇಶಕ್ಕೆ 152 ಮತ್ತು ಛತ್ತೀಸ್‌ಗಢಕ್ಕೆ 230 ವೆಂಟಿಲೇಟರ್‌ಗಳನ್ನು ಒದಗಿಸಿದೆ ಎಂದು ವರ್ಧನ್ ಹೇಳಿದ್ದಾರೆ.