ನವದೆಹಲಿ : ಕೊರೋನಾ ಹಿನ್ನೆಲೆಯಲ್ಲಿ ವರ್ಷ ಪಠ್ಯಕ್ರಮಗಳನ್ನು ಕಡಿತಗೊಳಿಸಲಾಗಿತ್ತು. ಆದರೆ 2021-22 ರ ಶೈಕ್ಷಣಿಕ ವರ್ಷದಲ್ಲಿ 9-12 ನೇ ತರಗತಿಗಳ ಪಠ್ಯಕ್ರಮವನ್ನು ಕಡಿತಗೊಳಿಸದೇ ಇರಲು ಸಿಬಿಎಸ್‌ಇ ನಿರ್ಧರಿಸಿದೆ.
ಕಳೆದ ವರ್ಷ ಕೊರೋನಾ, ಲಾಕ್ ಡೌನ್ ಕಾರಣಗಳಿಂದಾಗಿ 9-12 ನೇ ತರಗತಿ ವಿದ್ಯಾರ್ಥಿಗಳಿಗೆ ಶೇ.30 ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಲಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಶಾಲೆಗಳು ಬಂದ್ ಆಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಆನ್ ಲೈನ್ ನಲ್ಲಿ ನಡೆಯುತ್ತಿದ್ದರಿಂದ ಕಳೆದ ವರ್ಷ ಈ ಕ್ರಮ ಕೈಗೊಳ್ಳಲಾಗಿತ್ತು.
ಕಳೆದ ವರ್ಷ ಪಠ್ಯಕ್ರಮಗಳಿಂದ ಕೈಬಿಡಲಾಗಿದ್ದ ವಿಷಯಗಳನ್ನು ಈ ಬಾರಿ ಪುನಃ ಸೇರ್ಪಡೆಗೊಳಿಸಲಾಗಿದೆ ಎಂದು ಸಿಬಿಎಸ್‌ಇ ತಿಳಿಸಿದೆ. ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕಳೆದ ವರ್ಷ ಪೌರತ್ವ, ಜಾತ್ಯತೀತತೆ, ರಾಷ್ಟ್ರೀಯತೆ ಮತ್ತು ಫೆಡರಲಿಸಂ ಕುರಿತ ಪಾಠಗಳನ್ನು ಕೈಬಿಡಲಾಗಿತ್ತು.