ದಂಡಿ, ಗುಜರಾತ್: '2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 100 ವರ್ಷ ತುಂಬುತ್ತವೆ. ಆ ಹೊತ್ತಿಗೆ ನವ ಭಾರತ ನಿರ್ಮಾಣದ ರೂಪುರೇಷೆ ಸಿದ್ಧವಾಗಿರುತ್ತದೆ ಎಂಬ ವಿಶ್ವಾಸ ಹೊಂದಿದ್ದೇನೆ' ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಹೇಳಿದರು.
ಅಹಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮದಿಂದ ದಂಡಿವರೆಗೆ 25 ದಿನಗಳ ಕಾಲ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣೆಯ 'ಆಜಾದ್ ಕಾ ಅಮೃತ್ ಮಹೋತ್ಸವ್' ಕಾರ್ಯಕ್ರಮದ ಭಾಗವಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. 81 ಜನರು ಇದರಲ್ಲಿ ಪಾಲ್ಗೊಂಡಿದ್ದರು.
'ಸ್ವಾತಂತ್ರ್ಯ ಸಿಕ್ ಕದಿನದಿಂದ ಇಲ್ಲಿಯ ವರೆಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವು ಸಾಗಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನೂ ಮಾಡಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದೇ ನಮ್ಮ ಧ್ಯೇಯವಾಕ್ಯ' ಎಂದರು.
ಈಗ ಇಡೀ ಜಗತ್ತೇ ನಮ್ಮ ದೇಶದ ಸಾಮರ್ಥ್ಯವನ್ನು ಗುರುತಿಸಿ, ಗೌರವಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ವಿವಿಧ ಪಕ್ಷಗಳ ಆಡಳಿತ ಇದ್ದರೂ ಎಲ್ಲ ರಾಜ್ಯ ಸರ್ಕಾರಗಳ ಸಾಧನೆಯೇ ಇದಕ್ಕೆ ಕಾರಣ' ಎಂದು ನಾಯ್ಡು ಹೇಳಿದರು.