ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ಲಸಿಕೆ ನೀಡಿಕೆಯಲ್ಲಿ ಭಾರತ ದಾಖಲೆ ಬರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 36.7 ಲಕ್ಷ ಡೋಸ್ ಲಸಿಕೆ ವಿತರಣೆ ಮಾಡಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ದೇಶಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 36.7 ಲಕ್ಷ ಡೋಸ್ ಲಸಿಕೆ ವಿತರಣೆ ಮಾಡಲಾಗಿದ್ದು, ಇದು ಈ ವರೆಗಿನ ಗರಿಷ್ಟ ಪ್ರಮಾಣದ ಲಸಿಕೆ ವಿತರಣೆಯಾಗಿದೆ ಎಂದು ಹೇಳಲಾಗಿದೆ. 24 ಗಂಟೆಗಳ ಅವಧಿಯಲ್ಲಿ 36,71,242 ಡೋಸ್ ಲಸಿಕೆ ನೀಡಲಾಗಿದ್ದು. ಈ ಪೈಕಿ 51,215 ಸೆಷನ್ ಗಳಲ್ಲಿ 33,65,597 ಮಂದಿಗೆ ಡೋಸ್ ಮತ್ತು 3,05,645 ಮಂದಿ ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದು ಈ ವರೆಗಿನ ಒಂದು ದಿನದ ಗರಿಷ್ಠ ಲಸಿಕೆ ನೀಡಿಕೆ ಎಂದು ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಂತೆಯೇ ಶುಕ್ರವಾರ ಬೆಳಗ್ಗೆ 7 ಗಂಟೆಯ ಹೊತ್ತಿಗೆ ದೇಶಾದ್ಯಂತ 11,37,456 ಸೆಷನ್ ಗಳಲ್ಲಿ 6.87 ಕೋಟಿ (6,87,89,138) ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. ಈ ಪೈಕಿ 83,06,269 ಆರೋಗ್ಯ ಸಿಬ್ಬಂದಿಗಳಿಗೆ ಮೊದಲ ಡೋಸ್ ಮತ್ತು 52,84,564 ಆರೋಗ್ಯ ಸಿಬ್ಬಂದಿಗಳಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಉಳಿದಂತೆ 93,53,021 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 40,97,634 ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದಲ್ಲದೆ 45 ವರ್ಷ ಮೇಲ್ಪಟ್ಚ ಮತ್ತು ವಿವಿಧ ಅನಾರೋಗ್ಯ ಸಮಸ್ಯೆಗಳಿರುವ 97,83,615 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು 39,401 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಇದಲ್ಲದೆ 60 ವರ್ಷ ಮೇಲ್ಪಟ್ಟ 3,17,05,893 ಮಂದಿ ಹಿರಿಯ ನಾಗರಿಕರಿಗೆ ಮೊದಲ ಡೋಸ್ ಮತ್ತು 2,18,741 ಹಿರಿಯ ನಾಗರಿಕರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದ ಒಟ್ಟಾರೆ ಕೋವಿಡ್ ಲಸಿಕೆ ನೀಡಿಕೆ ಪೈಕಿ 8 ರಾಜ್ಯಗಳಲ್ಲಿ ಶೇ.59.58ರಷ್ಟು ಲಸಿಕೆ ನೀಡಲಾಗಿದೆ. ಈ 8 ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಮತ್ತು ಕೇರಳ ಇದೆ. ಅಂತೆಯೇ ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಪಂಜಾಬ್, ತಮಿಳುನಾಡು, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿನ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಅಂತೆಯೇ ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 6,14,696ಕ್ಕೆ ಏರಿಕೆಯಾಗಿದೆ.