ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಪ್ರಧಾನ ವ್ಯಾಪಾರ ಕೇಂದ್ರಗಳಲ್ಲಿ ಪ್ರವೇಶಾತಿಗಾಗಿ ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರ ಏರ್ಪಡಿಸಿರುವ ಕಟ್ಟುನಿಟ್ಟು ಮುಂದಿನ ಶನಿವಾರ(ಏ.24) ಬೆಳಗ್ಗಿನಿಂದಲೇ ಅನುಷ್ಠಾನಕ್ಕೆ ಬರಲಿದೆ.
ತಕ್ಷಣ ಜಾರಿಗೊಳಿಸಿದಲ್ಲಿ ಸಾರ್ವಜನಿಕರಿಗೆ ಸಂಭವಿಸಬಹುದಾದ ಸಂಕಷ್ಟ ಮನಗಂಡು ಮುಂದಿನ ಶನಿವಾರದಿಂದ ಈ ಕಟ್ಟುನಿಟ್ಟು ಜಾರಿಗೊಳಿಸಲು ಶನಿವಾರ ತುರ್ತಾಗಿ ಸೇರಲಾದ ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರದ ಸಭೆ ಈ ತೀರ್ಮಾನ ಕೈಗೊಂಡಿದೆ.
ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
14 ದಿನಗಳ ಅವಧಿಯಲ್ಲಿ ಕೋವಿಡ್ ತಪಾಸಣೆ ನಡೆಸಿ ಪಡೆದ ನೆಗೆಟಿವ್ ಸರ್ಟಿಫಿಕೆಟ್ ಅಥವಾ ಎರಡು ಡೋಸ್ ವಾಕ್ಸಿನೇಷನ್ ನಡೆಸಿರುವ ಸರ್ಟಿಫಿಕೆಟ್ ಇರುವವರು ಮಾತ್ರ ಜಿಲ್ಲೆಯ ಪ್ರಧಾನ ಕೇಂದ್ರಗಳಾದ ಕಾಸರಗೋಡು, ಉಪ್ಪಳ, ಕುಂಬಳೆ, ಕಾಞಂಗಾಡು, ನೀಲೇಶ್ವರ, ಚೆರುವತ್ತೂರು ಪೇಟೆಗಳನ್ನು ಪ್ರವೇಶಿಸಬಹುದಾಗಿದೆ ಎಂದು ಸಭೆ ತಿಳಿಸಿದೆ.
ಈ ಆದೇಶ ಅನುಷ್ಠಾನವಿರುವ ಪೇಟೆಗಳ ರಸ್ತೆಗಳ ಎರಡೂ ಬದಿಗಳಲ್ಲಿ ಪೆÇಲೀಸರು ತಪಾಸಣೆ ನಡೆಸುವರು. ಕೋವಿಡ್ ತಪಾಸಣೆ ಮತ್ತು ವಾಕ್ಸಿನೇಷನ್ ಸೌಲಭ್ಯಗಳೂ ಈ ತಪಾಸಣೆ ಕೇಂದ್ರಗಳಲ್ಲಿ ಇರುವುವು. ಈ ಕಟ್ಟುನಿಟ್ಟಿನ ಪ್ರದೇಶಗಳಲ್ಲಿ ತಲಾ ಒಬ್ಬ ಕಾರ್ಯಕಾರಿ ಮೆಜಿಸ್ಟ್ರೇಟ್ ಅವರನ್ನು ನೇಮಿಸಲಾಗುವುದು.