ನವದೆಹಲಿ : ಭಾರತದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆಯನ್ನು ಕಡಿಮೆ ಮಾಡಲು ದ್ರವರೂಪದ ಆಕ್ಸಿಜನ್ಅನ್ನು ಸಾಗಣೆ ಮಾಡುವುದಕ್ಕಾಗಿ 24 ಕ್ರಯೋಜೆನಿಕ್ ಕಂಟೇನರ್ಗಳನ್ನು ಆಮದು ಮಾಡುವುದಾಗಿ ಟಾಟಾ ಕಂಪೆನಿಗಳ ಗುಂಪು ಪ್ರಕಟಿಸಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಒಂದಾಗಿ ನಿಲ್ಲಬೇಕು ಎಂದು ನಿನ್ನೆ ಪ್ರಧಾನಿ ಮೋದಿ ಮಾಡಿದ ಮನವಿಗೆ ಸ್ಪಂದಿಸಿ, ಈ ಘೋಷಣೆ ಮಾಡಿದೆ.
ಮೊನ್ನೆ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರೊನಾ ರೋಗಿಗಳಿಗೆ ಉಂಟಾಗುತ್ತಿರುವ ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದರು. ಕರೊನಾ ವಿರುದ್ಧದ ಹೋರಾಟದಲ್ಲಿ ಧೈರ್ಯ ಕಳೆದುಕೊಳ್ಳದಂತೆ ಮನವಿ ಮಾಡಿದ್ದರು. ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಸ್ವತಃ ಸಂಪೂರ್ಣವಾಗಿ ಪಾಲಿಸಬೇಕೆಂದು ಕೋರಿದ್ದರು.
ಇದರ ಬೆನ್ನಲ್ಲೇ ಭಾರತದ ಉದ್ಯಮ ಕ್ಷೇತ್ರದ ಮೂಂಚೂಣಿಯಲ್ಲಿರುವ ಟಾಟಾ ಗುಂಪು, 'ದೇಶದ ಜನರಿಗೆ ಪ್ರಧಾನಿ ಮೋದಿ ಅವರ ಮನವಿ ಶ್ಲಾಘನೀಯವಾಗಿದೆ. ಕರೊನಾ ವಿರುದ್ಧದ ಹೋರಾಟವನ್ನು ಸಶಕ್ತಗೊಳಿಸಲು ಟಾಟಾ ಗುಂಪು ಬದ್ಧವಾಗಿದೆ. ಆಕ್ಸಿಜನ್ ಸಮಸ್ಯೆಯನ್ನು ನೀಗಿಸಲು, ಆರೋಗ್ಯ ಮೂಲಸೌಕರ್ಯಕ್ಕೆ ಶಕ್ತಿ ತುಂಬುವ ಒಂದು ಪ್ರಯತ್ನ ಮಾಡುತ್ತಿದ್ದೇವೆ' ಎಂದು ಟ್ವೀಟ್ ಮಾಡಿತು. ದ್ರವರೂಪದ ಆಕ್ಸಿಜನ್ಅನ್ನು ಸಾಗಿಸಲು ಸಹಕಾರಿಯಾಗುವಂತೆ 24 ಕ್ರಯೋಜೆನಿಕ್ ಕಂಟೇನರ್ಗಳನ್ನು ಆಮದು ಮಾಡುವುದಾಗಿ ಘೋಷಿಸಿತು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮೋದಿ ಅವರು, ಇದನ್ನು 'ಸಹಾನುಭೂತಿಯ ಸಂಕೇತ' (ಕಂಪಾಷನೇಟ್ ಜೆಸ್ಚರ್) ಎಂದು ಬಣ್ಣಿಸಿ, 'ಒಟ್ಟಾಗಿ, ಭಾರತದ ಜನರು ಕೋವಿಡ್ 19 ಅನ್ನು ಎದುರಿಸುವರು' ಎಂದು ಟ್ವೀಟ್ ಮಾಡಿದ್ದಾರೆ.