ಹರಿದ್ವಾರ: ಮಹಾಕುಂಭಮೇಳ ಉತ್ತರಾಖಂಡ್ ಪಾಲಿಗೆ ಕೋವಿಡ್-19 ಸೂಪರ್ ಸ್ಪ್ರೆಡರ್ ಕಾರ್ಯಕ್ರಮವಾಗಿ ಮಾರ್ಪಾಡಾಗಿದ್ದು, 25 ದಿನಗಳಲ್ಲಿ ರಾಜ್ಯದ ಕೋವಿಡ್-19 ಪ್ರಕರಣಗಳ ಸಂಖ್ಯೆ 1,800% ನಷ್ಟು ಏರಿಕೆ ಕಂಡಿದೆ.
ಮಾ.31 ರಿಂದ ಏ.24 ವರೆಗೆ ಕುಂಭಮೇಳಕ್ಕೆ ಭೇಟಿ ನೀಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ತತ್ಪರಿಣಾಮವಾಗಿ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆಯಲ್ಲಿಯೂ ಭಾರಿ ಏರಿಕೆ ಕಂಡಿದೆ. ಕುಂಭಮೇಳಕ್ಕೂ ಮುನ್ನ ಅಥವಾ ಪ್ರಾರಂಭದ ದಿನಗಳಲ್ಲಿ (ಮಾ.31 ರ ವೇಳೆಗೆ) ರಾಜ್ಯದಲ್ಲಿ 1,863 ಸಕ್ರಿಯ ಪ್ರಕರಣಗಳಿತ್ತು. ಆದರೆ ಏ.1 ರಿಂದ ಪ್ರಾರಂಭವಾದ ನಂತರದಲ್ಲಿ, ಏ.24 ರ ವೇಳೆಗೆ ಸಕ್ರಿಯ ಪ್ರಕರಣಗಳು 33,330 ಕ್ಕೆ ಏರಿಕೆಯಾಗಿತ್ತು.
ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಪರ್ವದಿನಗಳಾದ (ಶಾಹಿ ಸ್ನಾನದ ದಿನ) ಏ.12 ರಂದು 35 ಲಕ್ಷ ಮಂದಿ ಹಾಗೂ ಏ.14 ರಂದು 13.51 ಲಕ್ಷ ಮಂದಿ ಹರಿದ್ವಾರದಲ್ಲಿ ಸೇರಿದ್ದರು. ಸರ್ಕಾರದ ವಕ್ತಾರ ಹಾಗೂ ಸಚಿವ ಸುಬೋಧ್ ಉನಿಯಾಲ್ ಮಾತನಾಡಿ, ಕೋವಿಡ್-19 ಪ್ರಕರಣಗಳು ಹೆಚ್ಚಾಗುವುದಕ್ಕೆ ಪ್ರವಾಸಿಗರೇ ಕಾರಣ, ಕೋವಿಡ್-19 ಸಮಸ್ಯೆ ಶೀಘ್ರವೇ ಬಗೆಹರಿಯುವ ನಿಟ್ಟಿನಲ್ಲಿ ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಂಗಳವಾರದಂದು (ಏ.27 ರಂದು) ಕೊನೆಯ ಶಾಹಿ ಸ್ನಾನ ನಿಗದಿಯಾಗಿದೆ. ಈ ಬಗ್ಗೆ ನಿರಂಜನಿ ಅಖಾಡದ ಮಹಾಂತ್ ರವೀಂದ್ರ ಪುರಿ ಅವರು ಮಾತನಾಡಿದ್ದು, ಶಾಹಿ ಸ್ನಾನ ಕೇವಲ ಸಾಂಕೇತಿಕವಾಗಿ ನಡೆಯಬೇಕೆಂದು ನಾವು ಈಗಾಗಲೇ ಘೋಷಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಮುಂದಿನ ತಿಂಗಳು ಚಾರ್ ಧಾಮ್ ಯಾತ್ರೆ ನಿಗದಿಯಾಗಿದ್ದು, ಇದು ಮತ್ತೊಂದು ಕುಂಭಮೇಳವಾಗದಂತೆ ಎಚ್ಚರಿಕೆ ವಹಿಸಿ ಯಾತ್ರೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ.
ಇದೇ ವೇಳೆ ಚಾರ್ ಧಾಮ್ ದೇವಸ್ವಂ ಮಂಡಳಿಯ ಅಧ್ಯಕ್ಷ ಹಾಗೂ ಆಯುಕ್ತ ರವಿನಾಥ್ ರಮಣ್ ಮಾತನಾಡಿದ್ದು, ಕೋವಿಡ್-19 ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಚಾರ್ ಧಾಮ್ ನ್ನು ನಡೆಸುವ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.