ನವದೆಹಲಿ: ದೇಶದ ಸಾಂಕ್ರಾಮಿಕ ಇತಿಹಾಸದಲ್ಲೇ ಕೋವಿಡ್-19 ಸೋಂಕು ದಾಖಲೆ ಬರೆದಿದ್ದು, ಒಂದೇ ದಿನ ಬರೊಬ್ಬರಿ 2.61ಲಕ್ಷ ಮಂದಿಗೆ ಸೋಂಕು ಒಕ್ಕರಿಸಿದ್ದು, ಅಂತೆಯೇ 1,501 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 2,61,500 ಸೋಂಕು ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದೆ. ಅಂತೆಯೇ ನಿನ್ನೆ 1,501 ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 1,77,150ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,38,423 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ ಒಟ್ಟಾರೆ ಗುಣಮುಖರ ಸಂಖ್ಯೆ 1,28,09,643ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 18,01,316 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 15,66,394 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಆ ಮೂಲಕ ಒಟ್ಟಾರೆ ಕೋವಿಡ್ ಪರೀಕ್ಷೆಗಳ ಸಂಖ್ಯೆ 26,65,38,416ಕ್ಕೆ ಏರಿಕೆಯಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಅಂತೆಯೇ ಈ ವರೆಗೂ 12,26,22,590 ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ದೇಶಾದ್ಯಂತ 2,34,692 ಕೇಸ್ ಗಳು ಪತ್ತೆಯಾಗಿತ್ತು. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ ಇಂದು ಈ ದಾಖಲೆಯನ್ನೂ ಮೀರಿಸುವಂತೆ 2.61ಲಕ್ಷ ಮಂದಿಗೆ ಸೋಂಕು ಒಕ್ಕರಿಸಿದೆ. ಆ ಮೂಲಕ ಸತತ 4ನೇ ದಿನವೂ 2 ಲಕ್ಷಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ.