ನವದೆಹಲಿ: ಟಿಕಾ ಉತ್ಸವದ ಮೊದಲ ದಿನವಾದ ಭಾನುವಾರ ಸಂಜೆಯವರೆಗೂ ಸುಮಾರು 27 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಏಪ್ರಿಲ್ 11ರಿಂದ ಏಪ್ರಿಲ್ 14ರವರೆಗೂ ಟಿಕಾ ಉತ್ಸವ ನಡೆಯಲಿದ್ದು, ಮೊದಲ ದಿನ ಅನೇಕ ಉದ್ಯೋಗಸ್ಥ ಸ್ಥಳಗಳಲ್ಲಿಯೂ ಲಸಿಕಾ ಕೇಂದ್ರವನ್ನು ತೆರೆಯಲಾಗಿತ್ತು. ಭಾನುವಾರವಾದ್ದರಿಂದ ಖಾಸಗಿ ಕ್ಷೇತ್ರದ ಕಚೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು.
ಯಾವುದೇ ದಿನ ಸರಾಸರಿ 45,000 ವ್ಯಾಕ್ಸಿನೇಷನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಭಾನುವಾರ 63,800 ಕೇಂದ್ರಗಳು ಕಾರ್ಯನಿರ್ವಹಿಸಿದ್ದು, ಟಿಕಾ ಉತ್ಸವದ ಮೊದಲ ದಿನದಲ್ಲಿ ಇಂದು ರಾತ್ರಿ 8 ಗಂಟೆಯವರೆಗೆ 27 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುವುದರೊಂದಿಗೆ ಜನವರಿ 16 ರಂದು ದೇಶಾದ್ಯಂತ ವ್ಯಾಕ್ಸಿನೇಷನ್ ಗೆ ಚಾಲನೆ ನೀಡಲಾಯಿತು ಮತ್ತು ಫೆಬ್ರವರಿಯಿಂದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವುದನ್ನು ಪ್ರಾರಂಭಿಸಲಾಯಿತು.
ನಂತರ ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಿರ್ದಿಷ್ಟ ಸಹ-ಅಸ್ವಸ್ಥ ಪರಿಸ್ಥಿತಿ ಇರುವವರಿಗೆ ಲಸಿಕೆ ನೀಡಲಾಯಿತು.
ಏಪ್ರಿಲ್ 1 ರಿಂದ 45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ಭಾನುವಾರ ರಾತ್ರಿ 8 ರವರೆಗಿನ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ ಒಟ್ಟು 10,43,65,035 ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.