ಕೊಚ್ಚಿ: ಖಾಲಿ ಬಿದ್ದಿರುವ ಮೂರು ರಾಜ್ಯಸಭಾ ಸದಸ್ಯರ ಆಯ್ಕೆಗಿರುವ ಚುನಾವಣೆ ಮೇ 2 ರೊಳಗೆ, ಈಗಿನ ವಿಧಾನಸಭೆಯ ಅವಧಿ ಮುಗಿಯುವ ಮೊದಲು ನಡೆಯಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ. ಸದನದ ಪ್ರಸ್ತುತ ಸದಸ್ಯರಿಗೆ ಮತದಾನದ ಹಕ್ಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ರಾಜ್ಯಸಭಾ ಚುನಾವಣೆಯನ್ನು ಮುಂದೂಡಿದ ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿ ಸಿಪಿಎಂ ಮತ್ತು ವಿಧಾನಸಭೆ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ಈ ಕ್ರಮಕ್ಕೆ ಸೂಚಿಸಿದೆ.
ಹೊಸ ವಿಧಾನಸಭೆ ರಚನೆಯಾದ ನಂತರ ರಾಜ್ಯಸಭಾ ಚುನಾವಣೆ ನಡೆಸಬೇಕು ಎಂದು ಕಾನೂನು ಸಲಹೆ ಪಡೆದಿರುವುದಾಗಿ ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಹೈಕೋರ್ಟ್‍ಗೆ ತಿಳಿಸಿತ್ತು. ಪ್ರಸ್ತುತವಿರುವ ಶಾಸಕಾಂಗವು ಮತ ಚಲಾಯಿಸುವುದು ನೈತಿಕವಾಗಿ ತಪ್ಪು ಎಂದು ಕಾನೂನು ಸಚಿವಾಲಯ ಹೇಳಿದೆ ಎಂದು ಆಯೋಗ ಹೇಳಿದೆ. ಆದರೆ ಹೈಕೋರ್ಟ್ ಈ ವಾದಗಳನ್ನು ತಿರಸ್ಕರಿಸಿದೆ.
ಈ ತಿಂಗಳ 21 ರ ಮೊದಲು ಅಧಿಸೂಚನೆ ಹೊರಡಿಸಲಾಗುವುದು ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ಚುನಾವಣೆ ಯಾವಾಗ ನಡೆಯುತ್ತದೆ ಎಂದು ಆಯೋಗ ನಿರ್ದಿಷ್ಟಪಡಿಸಿಲ್ಲ. ಕೇರಳದ ಮೂವರು ರಾಜ್ಯಸಭಾ ಸದಸ್ಯರು ಈ ತಿಂಗಳ 21 ರಂದು ನಿವೃತ್ತರಾಗಲಿದ್ದಾರೆ.
ಪ್ರಸ್ತುತವಿರುವ ಶಾಸಕಾಂಗದ ಮೂಲಕ ಚುನಾವಣೆ ನಡೆಸಿದರೆ ಸಿಪಿಎಂ ಎರಡು ಸ್ಥಾನಗಳನ್ನು ಗೆಲ್ಲಬಹುದು. ಈ ಹಿಂದೆ ಚುನಾವಣಾ ಆಯೋಗವು ವಿಧಾನಸಭೆಯ ಅವಧಿಯೊಳಗೆ ಮತದಾನ ನಡೆಯಲಿದೆ ಎಂದು ತಿಳಿಸಿತ್ತು.
ಚುನಾವಣೆ ಮುಂದೂಡಿದ ಹಿಂದಿರುವ ಕಾರಣಗಳನ್ನು ವಿವರಿಸಲು ಹೈಕೋರ್ಟ್ ಆಯೋಗವನ್ನು ಕೇಳಿದೆ.