ಲಂಡನ್ : ಕೋವಿಡ್ ಲಸಿಕೆ ಕಾರ್ಯಕ್ರಮ ಜಗತ್ತಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಬೆನ್ನಲ್ಲೇ, ಅನೇಕ ಕಡೆ ಅವುಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತಿವೆ. ಆಸ್ಟ್ರಾಜೆನಿಕಾ-ಆಕ್ಸ್‌ಫರ್ಡ್ ವಿವಿಯ ಕೋವಿಡ್ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮಗಳು ಕಂಡುಬಂದ ಹಿನ್ನೆಲೆಯಲ್ಲಿ ಅನೇಕ ದೇಶಗಳು ಅದರ ಬಳಕೆಯನ್ನು ಸ್ಥಗಿತಗೊಳಿಸಿವೆ.
ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ಬಳಕೆ ಬಳಿಕ ಕೆಲವರಲ್ಲಿ ರಕ್ತ ಹೆಪ್ಪುಗಟ್ಟಿದ ಪ್ರಕರಣಗಳು ವರದಿಯಾಗಿದ್ದವು. ಬ್ರಿಟನ್‌ನಲ್ಲಿ ಇಂತಹ ಅಪರೂಪದ 30 ಪ್ರಕರಣಗಳನ್ನು ಈಗ ಗುರುತಿಸಲಾಗಿದೆ. ಆಸ್ಟ್ರಾಜೆನಿಕಾ ಲಸಿಕೆ ಪಡೆದವರಲ್ಲಿ ಮಾತ್ರವೇ ಈ ರೀತಿಯ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಂಡುಬರುತ್ತಿವೆ. ಬಯೋಎನ್‌ಟೆಕ್ ಎಸ್‌ಇ ಮತ್ತು ಫೈಜರ್ ಐಎನ್‌ಸಿ ತಯಾರಿಸಿದ ಲಸಿಕೆಗಳನ್ನು ಪಡೆದವರಲ್ಲಿ ಇಂತಹ ಸಮಸ್ಯೆ ವರದಿಯಾಗಿಲ್ಲ.
ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕಂಡುಬಂದರೂ ಅದು ಗಂಭೀರವಲ್ಲ ಎಂದು ಆರೋಗ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಲಸಿಕೆಯು ರಕ್ತ ಹೆಪ್ಪುಗಟ್ಟುವ ಅಪಾಯ ಉಂಟುಮಾಡುವುದಕ್ಕಿಂತಲೂ ಕೋವಿಡ್-19 ತಡೆಯುವುದರ ನಿಟ್ಟಿನಲ್ಲಿ ಹೆಚ್ಚು ಪ್ರಯೋಜನಾಕಾರಿ ಎಂದು ಹೇಳಿದ್ದಾರೆ.
ಆಸ್ಟ್ರಾಜೆನಿಕಾದ ಲಸಿಕೆ ಪಡೆದ 11 ಮಿಲಿಯನ್ ಜನರ ಪೈಕಿ ಐದು ಮಂದಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ವಿರಳ ಪ್ರಕರಣ ಕಂಡುಬಂದಿದೆ ಎಂದು ಮಾರ್ಚ್ 18ರಂದು ಬ್ರಿಟನ್ ಔಷಧ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ಆ ಸಂಖ್ಯೆ 30ಕ್ಕೆ ಹೆಚ್ಚಳವಾಗಿದೆ.
ಇದುವರೆಗೂ ನೀಡಲಾದ 18.1 ಮಿಲಿಯನ್ ಡೋಸ್ ಲಸಿಕೆಗಳಲ್ಲಿ 22 ಸೆರೆಬ್ರಲ್ ಪಾಲ್ಸಿ ಸೈನಸ್ ತ್ರೊಂಬೋಸಿಸ್ ಎಂಬ ಅಪರೂಪದ ಮಿದುಳು ಹೆಪ್ಪುಗಟ್ಟುವ ಕಾಯಿಲೆ, 8 ಕಡಿಮೆ ಪ್ರಮಾಣದ ಬ್ಲಡ್ ಪ್ಲೇಟ್‌ಲೆಟ್ಸ್‌ನಿಂದಾಗಿ ಉಂಟಾದ ಇತರೆ ಹೆಪ್ಪುಗಟ್ಟುವ ಪ್ರಕರಣಗಳು ವರದಿಯಾಗಿವೆ.