ನವದೆಹಲಿ: ಕೊರೊನಾ ವೈರಸ್ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಲು ಅಂತರರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ವಿಧಿಸಿರುವ ನಿರ್ಬಂಧವನ್ನು ಮೇ 31ರ ವರೆಗೂ ವಿಸ್ತರಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಸುತ್ತೋಲೆ ಪ್ರಕಟಿಸಿದೆ.
ಭಾರತದಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರವನ್ನು 2021ರ ಮೇ 31ರ ವರೆಗೂ ನಿರ್ಬಂಧಿಸಲಾಗಿದೆ. ಈ ನಿರ್ಬಂಧವು ಅಂತರರಾಷ್ಟ್ರೀಯ ಕಾರ್ಗೊ ವಿಮಾನಗಳ ಕಾರ್ಯಾಚರಣೆಗಳ ಮೇಲೆ ಹಾಗೂ ನಿರ್ದಿಷ್ಟವಾಗಿ ಡಿಜಿಸಿಎ ಅನುಮತಿ ನೀಡಿರುವ ವಿಮಾನಗಳ ಹಾರಾಟಕ್ಕೆ ಅನ್ವಯವಾಗುವುದಿಲ್ಲ.
'ಈಗಾಗಲೇ ನಿಗದಿಯಾಗಿರುವ ಅಂತರರಾಷ್ಟ್ರೀಯ ವಿಮಾನಗಳನ್ನು ಆಯ್ದ ಮಾರ್ಗಗಳಲ್ಲಿ ಸಂಚರಿಸಲು ಅನುಮತಿ ನೀಡಬಹುದು' ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದು, ನಿತ್ಯ ಕೋವಿಡ್ ದೃಢಪಟ್ಟ 3.5 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ.