ನವದೆಹಲಿ: ಹೆಚ್ಚುತ್ತಿರುವ ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಭಾರತದ ಪ್ರಧಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್ನ ಮುಖ್ಯಸ್ಥರು ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಕಂಟೈನ್ಮೆಂಟ್ ಜೋನ್ಗಳನ್ನು ಸೃಷ್ಟಿಸುವುದು, ಜನಜಂಗುಳಿಯನ್ನು ನಿಯಂತ್ರಿಸುವುದು ಮತ್ತು ಲಸಿಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಅನುಸರಿಸಿದರೆ ಕರೊನಾ ಎರಡನೇ ಅಲೆಯನ್ನು ತಗ್ಗಿಸಬಹುದೆಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೆರಿಯಾ ತಿಳಿಸಿದರು.
ಎರಡನೇ ಅಲೆ ಯಾವಾಗಲೂ ಹೆಚ್ಚು ಅಪಾಯಕಾರಿ ಆಗಿರುತ್ತದೆ. ನಾವು ಹೆಚ್ಚು ಜಾಗೃತರಾಗಿರಬೇಕು. ಜಗತ್ತಿನಲ್ಲಿ ಪ್ರಸಾರವಾಗುವ ವೈರಸ್ ರೂಪಾಂತರಗಳಿವೆ ಎಂದು ನಮಗೆ ಮೊದಲೇ ತಿಳಿದಿತ್ತು. ಭಾರತದಲ್ಲಿ ಹೊಸ ತಳಿಗಳು ಕಂಡುಬರುವವರೆಗೂ ಕೇವಲ ಸಮಯದ ವಿಷಯವಾಗಿತ್ತು. ಇದೀಗ ಅದರೊಂದಿಗೆ ಹೋರಾಡಲೇ ಬೇಕಿದೆ ಎಂದಿದ್ದಾರೆ.
ನಾವು 3 ರಿಂದ 4 ಕೆಲಸಗಳನ್ನು ಮಾಡಬೇಕಾಗಿದೆ. ಸೋಂಕು ಹರಡುವುದನ್ನು ನಾವು ನಿಲ್ಲಿಸಬೇಕಿದೆ. ಹೀಗಾಗಿ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಚಿಕಿತ್ಸೆಯೊಂದಿಗೆ ಕಟ್ಟುನಿಟ್ಟಾದ ಕಂಟೈನ್ಮೆಂಟ್ ವಲಯ ರಚಿಸಬೇಕು. ಎರಡನೆಯದಾಗಿ, ನಾವು ಜನಸಂದಣಿಯನ್ನು ನಿಷೇಧಿಸಬೇಕು. ಮೂರನೆಯದಾಗಿ ನಾವು ಲಸಿಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ನಾವು ಈ ಹಿಂದೆ ದೇಶವನ್ನು ಕೆಂಪು, ಹಸಿರು, ಕಿತ್ತಳೆ ವಲಯಗಳಾಗಿ ಹೇಗೆ ವಿಂಗಡಿಸಿದ್ದೇವೆ, ನಾವು ಅದನ್ನು ಮತ್ತೆ ಮಾಡಬೇಕೆಂದರು.