ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಇನ್ನು ಬಾಕಿ ಇರುವ ಮೂರು ಹಂತಗಳ ಚುನಾವಣೆಯನ್ನು ಒಂದೇ ದಿನದಲ್ಲಿ ನಡೆಸಬೇಕು ಎಂದು ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಮನವಿ ಮಾಡಿದ್ದು, ಇದಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ.
ಟಿಎಂಸಿ ನಾಯಕ ಡೆರೆಕ್ ಒ ಬ್ರಿಯಾನ್ ಅವರಿಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ್ದು, "ಮೂರು ಹಂತಗಳ ಚುನಾವಣೆಯನ್ನು ಈಗ ಒಂದೇ ಹಂತದಲ್ಲಿ ಮುಗಿಸುವುದು ಕಾರ್ಯಸಾಧುವಲ್ಲ" ಎಂದಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಉಳಿದಿರುವ ಮೂರು ಹಂತಗಳ ಚುನಾವಣೆಯನ್ನು ಒಂದೇ ದಿನ ಆಯೋಜಿಸಬೇಕು ಎಂದು ಟಿಎಂಸಿ ಮನವಿ ಮಾಡಿತ್ತು.
ಟಿಎಂಸಿಯ ಒಬ್ರಿಯಾನ್, ಸುಖೇಂದು ಶೇಖರ್ ರಾಯ್, ಪ್ರತಿಮಾ ಮಂಡಲ್, ಪೂರ್ಣೇಂದು ಬಸು ಚುನಾವಣಾ ಆಯುಕ್ತರ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದ್ದರು. ಪಕ್ಷ ಹಾಗೂ ಅಭ್ಯರ್ಥಿಗಳು 52 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಿದ್ದಾರೆ, ಹಾಗಾಗಿ ಒಂದೇ ದಿನ ಚುನಾವಣೆ ನಡೆಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದರು.
"ಆರನೇ, ಏಳನೇ ಹಾಗೂ ಎಂಟನೇ ಹಂತದ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವುದು ಸಾಧ್ಯವಿಲ್ಲ. ಕೊರೊನಾ ಮಾರ್ಗಸೂಚಿಗಳ ನಡುವೆ ಚುನಾವಣೆಯನ್ನು ಸುರಕ್ಷಿತವಾಗಿ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ" ಎಂದು ಪತ್ರದಲ್ಲಿ ಪ್ರತಿಕ್ರಿಯಿಸಿದೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಐದು ಹಂತದ ಚುನಾವಣೆ ಪೂರ್ಣಗೊಂಡಿದೆ. ಗುರುವಾರ, 22ರಂದು ಆರನೇ ಹಂತದ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.