ನವದೆಹಲಿ: ಕೋವಿಡ್-19 ಲಸಿಕೆ ಉತ್ಪಾದಕ ಕಂಪೆನಿಗಳಾದ ಭಾರತ್ ಬಯೋಟೆಕ್ ಮತ್ತು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗಳಿಗೆ ಸಾಲ ಪೂರೈಕೆ ಮಾಡಲು ಹಣಕಾಸು ಸಚಿವಾಲಯ ಸೋಮವಾರ ಅನುಮೋದನೆ ನೀಡಿದೆ.
ಈ ಸಾಲವನ್ನು ಕೋವಿಡ್-19 ಉಸ್ತುವಾರಿ ನಡೆಸುತ್ತಿರುವ ನೋಡಲ್ ಸಚಿವರಿಗೆ ಮಂಜೂರು ಮಾಡಲಾಗುತ್ತದೆ. ಅವರು ಅದನ್ನು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಈ ಎರಡೂ ಕಂಪೆನಿಗಳಿಗೆ ವರ್ಗಾವಣೆ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ.
ಪುಣೆ ಮೂಲದ ಎಸ್‌ಐಐಗೆ 3,000 ಕೋಟಿ ರೂ ಮತ್ತು ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಕಂಪೆನಿಗೆ 1,500 ಕೋಟಿ ರೂ ಸಾಲ ಒದಗಿಸಲು ಸಚಿವಾಲಯ ಅಂಗೀಕಾರ ನೀಡಿದೆ. ಈ ಮೊತ್ತವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ಕೋವಿಡ್ ಲಸಿಕೆಗಳ ಉತ್ಪಾದನೆಯ ಸಾಮರ್ಥ್ಯವನ್ನು ತಿಂಗಳಿಗೆ 100 ಮಿಲಿಯನ್ ಡೋಸ್‌ಗಿಂತಲೂ ಅಧಿಕ ಮಟ್ಟಕ್ಕೆ ವೃದ್ಧಿಸಲು 3,000 ಕೋಟಿ ರೂ ಸಾಲ ನೀಡುವಂತೆ ಎಸ್‌ಐಐ ಸಿಇಒ ಆದಾರ್ ಪೂನಾವಲ್ಲಾ ಸರ್ಕಾರವನ್ನು ಕೋರಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ನೆರವು ನೀಡಲು ಮುಂದಾಗಿದೆ.
ಕೆಲವು ದಿನಗಳ ಹಿಂದಷ್ಟೇ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಕ ಭಾರತ್ ಬಯೋಟೆಕ್ ಸಂಸ್ಥೆಗೆ ಸೌಲಭ್ಯ ವೃದ್ಧಿಯ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ 65 ಕೋಟಿ ರೂ ಅನುದಾನ ಘೋಷಿಸಿತ್ತು.