ನವದೆಹಲಿ : ಕಳೆದ ಎರಡು ತಿಂಗಳಲ್ಲಿ ಕರೊನಾ ಸೋಂಕಿನ ಪ್ರಮಾಣ 13 ಪಟ್ಟು ಹೆಚ್ಚಿದ್ದು, ಶುಕ್ರವಾರ ಒಂದೇ ದಿನ ಕಳೆದ 5 ತಿಂಗಳಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆಯನ್ನು ಭಾರತ ದಾಖಲಿಸಿದೆ. ಈ ಹೆಚ್ಚಳಕ್ಕೆ ಸಾಂಕ್ರಾಮಿಕ ಕರೊನಾ ವೈರಸ್ ಬಗೆಗಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯ ಸರ್ಕಾರಗಳು ಜನಜೀವನದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿವೆ.
ಆದರೆ, ಚುನಾವಣೆ ನಡೆಯುತ್ತಿದ್ದ ಐದು ರಾಜ್ಯಗಳಲ್ಲಿ ಮಾತ್ರ ಎಲ್ಲಾ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ಜನರನ್ನು ಸೇರಿಸಿ ಪ್ರಚಾರ ಸಭೆಗಳನ್ನು ನಡೆಸಿರುವುದು ಎಲ್ಲರ ಗಮನಕ್ಕೆ ಬಂದಿದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗವು, ಕರೊನಾ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ ಚುನಾವಣಾ ರಾಲಿ ಮತ್ತು ಸಭೆಗಳನ್ನು ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ರೀತಿಯ ನಿರ್ಲಕ್ಷ್ಯದಿಂದ ತಮ್ಮ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವೊಡ್ಡುತ್ತಿರುವ ರಾಜಕೀಯ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಹೊಸತೊಂದು ಎಚ್ಚರಿಕೆ ನೀಡಿದೆ.
'ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಪ್ರಚಾರ ಕಾರ್ಯ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ' ಎಂದಿರುವ ಆಯೋಗ, 'ಕರೊನಾ ಸುರಕ್ಷತಾ ನಿಯಮಗಳನ್ನು ಪಾಲಿಸದ ಅಭ್ಯರ್ಥಿಗಳು, ಸ್ಟಾರ್ ಕ್ಯಾಂಪೇನರ್ಗಳು ಅಥವಾ ರಾಜಕೀಯ ನಾಯಕರ ಮೇಲೆ ಯಾವುದೇ ಪ್ರಚಾರ ರಾಲಿ ಅಥವಾ ಸಭೆ ನಡೆಸದಂತೆ ನಿಷೇಧ ಹೇರಲು ಹಿಂಜರಿಯುವುದಿಲ್ಲ' ಎಂದು ಶುಕ್ರವಾರ ಖಡಕ್ ಎಚ್ಚರಿಕೆ ನೀಡಿದೆ.
ವಿಪರ್ಯಾಸವೆಂದರೆ, ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದ ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೆರಿಗಳಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದೆ. ಕೇವಲ ಪಶ್ಚಿಮ ಬಂಗಾಳದಲ್ಲಿ ಐದು ಸುತ್ತುಗಳ ಮತದಾನ ಬಾಕಿ ಇದೆ.