ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ -19 ತಪಾಸಣೆಯನ್ನು ಅಧಿಕಗೊಳಿಸಲಾಗುತ್ತಿದ್ದು, ಈ ವರೆಗೆ ತಪಾಸಣೆಗೊಳಗಾದವರ ಸಂಖ್ಯೆ 4 ಲಕ್ಷಕ್ಕೂ ಅಧಿಕವಾಗಿದೆ.
ರೋಗಲಕ್ಷಣ ಹೊಂದಿರುವವರೂ, ರೋಗಿಗಳ ಸಂಫರ್ಕ ಹೊಂದಿದವರೂ ಕಡ್ಡಾಯವಾಗಿ ತಪಾಸಣೆಗೊಳಗಾಗುವಂತೆ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕೋವಿಡ್ 19 ಅಧಿಕಗೊಂಡಿದ್ದ ಕಳೆದ ವಾರ 15643 ಮಂದಿಯ ಸ್ಯಾಂಪಲ್ ತಪಾಸಣೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 402521 ಮಂದಿಯ ತಪಾಸಣೆ ನಡೆದಿದೆ. ಇವರಲ್ಲಿ 167955 ಮಂದಿಗೆ ಆರ್.ಟಿ.ಪಿ.ಸಿ. ತಪಾಸಣೆ, 231475 ಮಂದಿಗೆ ಆಂಟಿಜೆನ್ ತಪಾಸಣೆ, 940 ಮಂದಿಗೆ ಆಂಟಿ ಬಾಡಿ ತಪಾಸಣೆ, 2151 ಮಂದಿಗೆ ಟ್ರೂನಾಟ್ ತಪಾಸಣೆ ನಡೆಸಲಾಗಿದೆ.
ಕೋವಿಡ್ 19 ಸೋಂಕು ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆ ತಿಳಿಸುವ ಎಲ್ಲ ವಿಧದ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. ಸೂಕ್ತ ಕಾರಣಗಳಿಲ್ಲದೆ ಆಸ್ಪತ್ರೆಗೆ ಬೇಟಿ ನೀಡುವುದನ್ನು ಬಿಟ್ಟು ಗರಿಷ್ಠ ಮಟ್ಟದಲ್ಲಿ ಇ-ಸಂಜೀವಿನಿ ಸೇವೆಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವಂತೆ ಅವರು ವಿನಂತಿಸಿದರು.