ನವದೆಹಲಿ : ಮೇ 1 ರಿಂದ 18 ವರ್ಷದ ಮೇಲ್ಪಟ್ಟ ಸಾರ್ವಜನಿಕರಿಗೆ ಕರೊನಾ ಲಸಿಕೆ ನೀಡಲು ಖಾಸಗಿ ವಲಯದಲ್ಲಿ ಅವಕಾಶ ಕಲ್ಪಿಸುವ ಮಹತ್ವದ ನಿರ್ಣಯವನ್ನು ಇಂದು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ತ್ವರಿತವಾಗಿ ಹೆಚ್ಚು ಜನರಿಗೆ ಕರೊನಾ ಲಸಿಕೆಯನ್ನು ತಲುಪಿಸುವ ಉದ್ದೇಶದಿಂದ ಲಸಿಕೆಯ ಬೆಲೆ ನಿಗದಿ, ಖರೀದಿ ಮತ್ತು ಹಂಚಿಕೆಯ ನಿಯಮಗಳನ್ನು ಸಡಿಲೀಕರಿಸಲಾಗಿದೆ.
ಈ ಮೂಲಕ ಬೃಹತ್ ಪ್ರಮಾಣದ ಮೂರನೇ ಹಂತದ ಲಸಿಕಾ ಅಭಿಯಾನವು ದೇಶಾದ್ಯಂತ ಆರಂಭವಾಗಲಿದೆ. ಆದರೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಈಗಿನಂತೆಯೇ ಆದ್ಯತೆಯ ಗುಂಪುಗಳಾದ 45 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಉಚಿತ ಲಸಿಕಾ ಅಭಿಯಾನ ಮುಂದುವರಿಯಲಿದೆ ಎನ್ನಲಾಗಿದೆ.
ಲಸಿಕೆ ಹಂಚಿಕೆ : ಲಸಿಕೆ ಉತ್ಪಾದನೆ ಮತ್ತು ಪೂರೈಕೆಗೆ ಹಲವು ಇನ್ಸೆಂಟೀವ್ಗಳನ್ನು ನೀಡಿರುವ ಸರ್ಕಾರ, ಲಸಿಕೆ ಉತ್ಪಾದಕರು ತಮ್ಮ ಪ್ರತಿ ತಿಂಗಳ ಉತ್ಪಾದಿತ ಲಸಿಕೆಗಳಲ್ಲಿ ಶೇ. 50 ರಷ್ಟನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಉಳಿದ ಶೇ. 50 ರಷ್ಟು ಲಸಿಕೆಗಳನ್ನು ರಾಜ್ಯ ಸರ್ಕಾರಕ್ಕೂ, ತೆರೆದ ಮಾರುಕಟ್ಟೆಗೂ ನೇರವಾಗಿ ವಿತರಿಸಬಹುದು ಎಂದು ಹೇಳಿದೆ. ಈ ನಿಯಮ ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲಾ ಲಸಿಕೆ ಕಂಪೆನಿಗಳಿಗೂ ಅನ್ವಯಿಸುತ್ತದೆ. ಆದರೆ, ಪೂರ್ಣವಾಗಿ ಬಳಕೆಗೆ ಸಿದ್ಧವಾಗಿ ಆಮದು ಮಾಡಿಕೊಳ್ಳಲ್ಪಡುವ ಲಸಿಕೆಗಳನ್ನು ಸರ್ಕಾರೇತರ ಚಾನೆಲ್ನಲ್ಲಿಯೇ ಬಳಸಲು ಅವಕಾಶ ನೀಡಲಾಗುವುದು.
ಕೇಂದ್ರ ಸರ್ಕಾರವು ತನ್ನ ಪಾಲಿನಲ್ಲಿ ರಾಜ್ಯಗಳಿಗೆ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಮತ್ತು ಉಪಯೋಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿತರಿಸಲಿದೆ. ಅಂದರೆ ಯಾವುದೇ ರಾಜ್ಯದಲ್ಲಿನ ಕರೊನಾ ಸೋಂಕಿನ ಪ್ರಮಾಣ(ಆಯಕ್ಟೀವ್ ಪ್ರಕರಣಗಳ ಸಂಖ್ಯೆ)ವನ್ನು ಮತ್ತು ಕಾರ್ಯಕ್ಷಮತೆ(ಲಸಿಕೆ ನೀಡುವ ವೇಗ)ಯನ್ನು ಆಧರಿಸಿ ಅದಕ್ಕೆ ನೀಡಲಾಗುವ ಲಸಿಕೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸಲಿದೆ. ಈ ನಿರ್ಧಾರ ಕೈಗೊಳ್ಳುವಾಗ ಎಷ್ಟು ಲಸಿಕೆಗಳನ್ನು ವ್ಯರ್ಥ ಮಾಡಲಾಗಿದೆ ಎಂಬುದನ್ನೂ ಪರಿಗಣಿಸಲಾಗುವುದು ಎನ್ನಲಾಗಿದೆ.
ರಾಜ್ಯ ಸರ್ಕಾರಗಳಿಗೆ ಮತ್ತು ತೆರೆದ ಮಾರುಕಟ್ಟೆಗೆ ವಿತರಿಸಲು ಅವಕಾಶ ನೀಡಿರುವ ಉಳಿದ ಶೇ. 50 ರಷ್ಟು ಲಸಿಕೆಗಳಿಗೆ ಉತ್ಪಾದಕರು ಮೇ 1 ರ ಮುಂಚೆ ಬೆಲೆ ನಿಗದಿ ಮಾಡಿ ಘೋಷಿಸಬೇಕಾಗಿದೆ. ಈ ಪಾಲಿನಲ್ಲೇ ಖಾಸಗಿ ಆಸ್ಪತ್ರೆಗಳು, ಲಸಿಕೆಯ ಸೇವೆ ನೀಡಲಿಚ್ಛಿಸುವ ಕೈಗಾರಿಕಾ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಲಸಿಕೆಗಳನ್ನು ಪಡೆದುಕೊಳ್ಳಬಹುದು. ಖಾಸಗಿ ಲಸಿಕೆ ಸೇವಾ ಕೇಂದ್ರಗಳು ಎಲ್ಲಾ ವಯಸ್ಕರಿಗೆ ಅಂದರೆ 18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಲಸಿಕೆ ನೀಡಲು ಅವಕಾಶವಿರುತ್ತದೆ. ಖಾಸಗಿ ಕೇಂದ್ರಗಳು ಪಾರದರ್ಶಕವಾಗಿ ಲಸಿಕೆಯ ಬೆಲೆಯನ್ನು ಪೂರ್ವನಿಗದಿ ಮಾಡಿ ಘೋಷಿಸಬೇಕು ಎಂದು ಸರ್ಕಾರ ಹೇಳಿದೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳು ಕೋ-ವಿನ್ ಮೂಲಕ ರೂಪಿಸಲಾಗಿರುವ ಲಸಿಕೆ ಪ್ರೋಟೋಕಾಲ್ಅನ್ನು ಪಾಲಿಸಬೇಕಾಗಿರುತ್ತದೆ. ತಮ್ಮ ಬಳಿ ಇರುವ ಸ್ಟಾಕ್ಗಳು ಮತ್ತು ಪಡೆಯುತ್ತಿರುವ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಇನ್ನು, ಈಗಾಗಲೇ ಮೊದಲನೇ ಡೋಸ್ ಪಡೆದಿರುವ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಎರಡನೇ ಡೋಸ್ಅನ್ನು ಎಲ್ಲಾ ಕಡೆ ನೀಡುವಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಸದ್ಯದಲ್ಲೇ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.