ತೇಜ್‌ಪುರ್: ಅಸ್ಸಾಂನಲ್ಲಿ ಬುಧವಾರ ಬೆಳಿಗ್ಗೆ 6.4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಸೋಣಿತ್ಪುರ್ ಜಿಲ್ಲೆಯಲ್ಲಿ ಈ ಭೂಕಂಪ ಸೃಷ್ಟಿಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
ಬೆಳಿಗ್ಗೆ 7:51ಕ್ಕೆ ಭೂಕಂಪ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಗುವಾಹಟಿ ಮತ್ತು ಇತರೆ ಕೆಲವು ಪ್ರದೇಶಗಳಲ್ಲಿನ ಕಟ್ಟಡಗಳಿಗೆ ಹಾನಿಯಾಗಿದೆ. ಪ್ರಾಣ ಹಾನಿಯ ಬಗ್ಗೆ ತಿಳಿದು ಬಂದಿಲ್ಲ.
'ಅಸ್ಸಾಂನಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ,' ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಟ್ವೀಟಿಸಿದ್ದಾರೆ. ಕಟ್ಟಡಗಳಿಗೆ ಹಾನಿಯಾಗಿರುವ ಚಿತ್ರಗಳು ಹಾಗೂ ರಿಕ್ಟರ್ ಮಾಪಕದಲ್ಲಿ ಭೂಕಂಪ ತೀವ್ರತೆಯ ಬಗ್ಗೆ ಮಾಹಿತಿ ಪ್ರಕಟಿಸಿದ್ದಾರೆ.
'ಪ್ರಬಲ ಭೂಕಂಪ ಅಸ್ಸಾಂನಲ್ಲಿ ಸಂಭವಿಸಿದೆ. ಎಲ್ಲರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ, ಜನರೆಲ್ಲರೂ ಎಚ್ಚರ ವಹಿಸಿ. ಎಲ್ಲ ಜಿಲ್ಲೆಗಳಿಂದಲೂ ಮಾಹಿತಿ ಪಡೆಯುತ್ತಿದ್ದೇನೆ' ಎಂದು ಅಸ್ಸಾಂ ಸಿಎಂ ಸರ್ಬಾನಂದ ಸೋನಾವಾಲ್ ಹೇಳಿದ್ದಾರೆ.