ಮುಂಬೈ: ಮುಖೇಶ್ ಅಂಬಾನಿಯ ಬಲಗೈನಂತಿದ್ದ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಶಾ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಪ್ರಕಾಶ್ ಶಾ ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು. ಬಳಿಕ ಸನ್ಯಾಸಿ ಜೀವನ ನಡೆಸುವ ನಿರ್ಧಾರ ಮಾಡಿದ್ದು ಈ ಹಿಂದೆಯೇ ಸನ್ಯಾಸತ್ವದ ದೀಕ್ಷೆ ಪಡೆಯಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ದೀಕ್ಷೆ ಕಾರ್ಯಕ್ರಮವನ್ನು ಮುಂದೂಡಿದ್ದರು.
ಇದೀಗ ಪ್ರಕಾಶ್ ಶಾ ಜೈನ ಮುನಿಗಳ ಬಳಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇನ್ನು ಪ್ರಕಾಶ್ ಶಾ ಅವರು ಶ್ವೇತ ವಸ್ತ್ರ, ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಕಾಶ್ ಶಾ ಅವರು 40 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರು. ಇನ್ನು ರಿಲಯನ್ಸ್ ಕಂಪನಿಯ ಜಾಮ್ ನಗರದ ಪೆಟಕೊಕ್ ಗ್ಯಾಸ್ಫಿಕೇಷನ್ ಪ್ರೊಜಕ್ಟ್ ಆರಂಭಿಸುವಲ್ಲಿ ಶಾ ಮಹತ್ವದ ಪಾತ್ರವಿತ್ತು.
ಪ್ರಕಾಶ್ ಶಾ ಸನ್ಯಾಸತ್ವ ದೀಕ್ಷೆ ಪಡೆದಿರುವ ಫೋಟೋವನ್ನು ಟ್ವೀಟ್ ಮಾಡಿರುವ ಧವಲ್ ಬಯ್ಯಾನಿ ಎಂಬುವರು ಪ್ರಕಾಶ್ ಅವರು ವರ್ಷಕ್ಕೆ 75 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.