ನವದೆಹಲಿ ; ಭಾರತದಲ್ಲಿ ಮತ್ತೊಂದು ಸುತ್ತಿನ ಲಸಿಕಾ ಅಭಿಯಾನಕ್ಕೆ ತಯಾರಿ ಆರಂಭಗೊಂಡಿದೆ. ದೇಶದಲ್ಲಿ ಮೇ 1 ರಿಂದ 18 ರಿಂದ 45 ವರ್ಷದೊಳಗಿನ ಜನರು ಲಸಿಕೆಯನ್ನು ಪಡೆಯಬಹುದಾಗಿದೆ.
ಸೋಂಕಿನ ವಿರುದ್ಧದ ಲಸಿಕೆಯನ್ನು ಪಡೆಯುವವರು ಏಪ್ರಿಲ್ 28ರಿಂದ ನೋಂದಣಿ ಮಾಡಿಸಬಹುದು. ಆರೋಗ್ಯ ಸೇತು ಅಪ್ಲಿಕೇಶನ್, ಕೋವಿನ್ ಸೇರಿದಂತೆ ವಿವಿಧ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಆರಂಭಗೊಂಡಿದೆ.
ಬುಧವಾರ ಸಂಜೆ 4 ಗಂಟೆಗೆ ನೋಂದಣಿ ಆರಂಭಿಸಲಾಯಿತು. ದೇಶದ ಜನರು ಒಮ್ಮೆಲೇ ನೋಂದಣಿಗೆ ಮುಗಿಬಿದ್ದಿದ್ದರಿಂದ ಕೋವಿನ್ ಮತ್ತು ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಕೆಲಕಾಲ ಸಮಸ್ಯೆ ಉಂಟಾಯಿತು. ಬಳಿಕ ಅದು ಸರಿ ಹೋಯಿತು.
ದೇಶದಲ್ಲಿ ಮೊದಲ ದಿನ 79.65 ಲಕ್ಷ ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್. ಎಸ್. ಶರ್ಮಾ ಹೇಳಿದ್ದಾರೆ. ಪ್ರತಿ ಸೆಕೆಂಡ್‌ಗೆ 55 ಹಿಟ್‌ಗಳನ್ನು ಅಪ್ಲಿಕೇಶನ್ ಪಡೆದಿದ್ದು, ಅದಕ್ಕೆ ತಕ್ಕಂತೆ ಅದು ಕಾರ್ಯ ನಿರ್ವಹಣೆ ಮಾಡಿದೆ.
4 ಗಂಟೆಗೆ ನೋಂದಣಿ ಆರಂಭವಾಗುತ್ತಿದ್ದಂತೆ ಕೋವಿನ್ ಅಪ್ಲಿಕೇಶನ್‌ನಲ್ಲಿ ಮೊಬೈಲ್ ಓಟಿಪಿ ಬರುತ್ತಿಲ್ಲ ಎಂದು ಜನರು ದೂರಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗಳು ಆರಂಭವಾಯಿತು.
"ಹಿಂದಿನ ನೋಂದಣಿಗಿಂತ ಎರಡು ಪಟ್ಟು ಜನರು ಇಂದು ನೋಂದಣಿ ಮಾಡಿಸಬಹುದು ಎಂದು ನಾವು ಅಂದಾಜಿಸಿದ್ದೆವು. ನಮ್ಮ ಸರ್ವರ್‌ಗಳು ವೇಗಕ್ಕೆ ತಕ್ಕಂತೆ ಕಾರ್ಯ ನಿರ್ವಹಣೆ ಮಾಡಿವೆ" ಎಂದು ಆರ್. ಎಸ್. ಶರ್ಮಾ ಹೇಳಿದರು.
ಅಪ್ಲಿಕೇಶನ್ ಮೂಲಕ ಲಾಗಿನ್ ಆಗುವ ವ್ಯಕ್ತಿ ತಾನು ಸೇರಿದಂತೆ ಕನಿಷ್ಠ ಮೂವರು ಕುಟುಂಬ ಸದಸ್ಯರ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ. ನೋಂದಣಿ ಬಳಿಕ ಹತ್ತಿರದ ಸರ್ಕಾರಿ, ಖಾಸಗಿ ಲಸಿಕಾ ಕೇಂದ್ರದ ಮಾಹಿತಿ ಜನರಿಗೆ ಸಿಗಲಿದೆ.
ಜನರು ಆನ್‌ಲೈನ್ ಮೂಲಕ ನೋಂದಣಿ ಮಾಡುವುದರಿಂದ ಲಸಿಕಾ ಕೇಂದ್ರಗಳ ಬಳಿ ಸಾಮಾಜಿಕ ಅಂತರ ಕಾಪಾಡುವುದು, ಜನಜಂಗುಳಿ ತಡೆಯಲು ಸಾಧ್ಯವಾಗಲಿದೆ. ಹತ್ತಿರದ ಲಸಿಕಾ ಕೇಂದ್ರದ ವಿವರ ಜನರಿಗೆ ಅಲ್ಲಿಯೇ ಸಿಗಲಿದೆ.