ವಾಷಿಂಗ್ಟನ್: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವುದು ಹಿರಿಯರು.. ಆದರೆ ನೂತನ ವರದಿಯ ಅನ್ವಯ ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಕೋವಿಡ್ ಸೋಂಕು ತಗುಲಿದರೂ ಹಿರಿಯರನ್ನು ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಶೇ.94ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ಅಮೆರಿಕದ ಫೆಡರಲ್ ಸ್ಟಡಿ ಇಂತಹುದೊಂದು ಸಮಾಧಾನಕರ ವರದಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಕೋವಿಡ್ ಲಸಿಕೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ವೈರಸ್ ಸೋಂಕು ನಿರೋಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ದೂರಾಗುತ್ತದೆ. ಇದು ಲಸಿಕೆಗಳ ಪರೀಕ್ಷೆಯಲ್ಲಿಯೂ ದೃಢವಾಗಿತ್ತು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಇಲಾಖೆ ಹೇಳಿದೆ.
ಈ ಸಂಶೋಧನೆಯಲ್ಲಿ ಕೋವಿಡ್ ಲಸಿಕೆ ಪಡೆಯದವರಿಗೆ ಹೋಲಿಕೆ ಮಾಡಿದರೆ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ 65 ವರ್ಷ ಮೇಲ್ಪಟ್ಟ ಹಿರಿಯರಲ್ಲಿ ಸೋಂಕು ತಗುಲಿ ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇ.94ರಷ್ಟು ಕಡಿಮೆ ಇರುತ್ತದೆ. ಒಂದು ಡೋಸ್ ಪಡೆದು ಸೋಂಕಿಗೆ ತುತ್ತಾದವರಲ್ಲಿ ಈ ಪ್ರಮಾಣ ಶೇ.64ರಷ್ಟಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಾಮಾನ್ಯವಾಗಿ ಹಿರಿಯರಲ್ಲಿ ಕೋವಿಡ್ ಸೋಂಕು ಅಲ್ಲದೇ ಇತರೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಹೀಗಾಗಿ ಇಂತಹವರಿಗೇ ಸೋಂಕು ತಗುಲಿದರೆ ಅನಿವಾರ್ಯವಾಗಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಆದರೆ ಕೋವಿಡ್ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಿಸಲೇಬೇಕಾದ ಅನಿವಾರ್ಯತೆ ಕಡಿಮೆಯಾಗುತ್ತದೆ. ಅಮೆರಿಕದಲ್ಲಿ ಈ ವರೆಗೂ ಸುಮಾರು 37 ಮಿಲಿಯನ್ ಹಿರಿಯ ವಯಸ್ಕರು ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ ಎಂದು ಸಿಡಿಸಿ ಮಾಹಿತಿ ನೀಡಿದೆ.
ಸಿಡಿಸಿ ಅಧ್ಯಯನವು ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಅಮೆರಿಕದ 14 ರಾಜ್ಯಗಳ 24 ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 417 ಜನರಲ್ಲಿ 187 ರೋಗಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. 2 ಡೋಸ್ ಲಸಿಕೆ ಪಡೆದಿದ್ದ 230 ರೋಗಿಗಳು ಬೇಗನೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಿರೀಕ್ಷೆಯಂತೆಯೇ ಕೋವಿಡ್ ಲಸಿಕೆ ಎರಡು ವಾರಗಳಿಗಿಂತ ಕಡಿಮೆ ಅವಧಿಯ ಮೊದಲ ಡೋಸ್ ಪಡೆದ ಜನರಿಗೆ ಯಾವುದೇ ರಕ್ಷಣೆ ನೀಡಿಲ್ಲ. ಆದರೆ ಎರಡೂ ಡೋಸ್ ಪಡೆದವರಲ್ಲಿ ದೇಹ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ರೂಪಿಸಲು ಲಸಿಕೆ ನೆರವಾಗಿದೆ ಮತ್ತು ಸೋಂಕಿನಿಂದ ಬೇಗ ಗುಣಮುಖರಾಗುವುದರಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಜ್ಞರು ಹೇಳಿದ್ದಾರೆ.