ಬೆಂಗಳೂರು: ತಮಿಳು ನಾಡಿನ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಪ್ರಮುಖ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ.
ಮೊನ್ನೆ 2ನೇ ತಾರೀಖು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕೊಯಮತ್ತೂರಿನಲ್ಲಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಬೆಳಗಿನ ಉಪಾಹಾರವನ್ನು ಕೊಯಮತ್ತೂರಿನ ಶ್ರೀ ಅನ್ನಪೂರ್ಣ ಹೊಟೇಲ್ ನಲ್ಲಿ ಸವಿದರು. ಅಲ್ಲಿ ಸೇರಿದ್ದ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಫೋಟೋ ತೆಗೆಸಿಕೊಂಡಿದ್ದರು.
ನಂತರ ಬಿಲ್ ನೀಡಲು ಬಿಲ್ ಕೌಂಟರ್ ಗೆ ಹೋದಾಗ ಕ್ಯಾಶಿಯರ್ ತೆಗೆದುಕೊಳ್ಳಲು ನಿರಾಕರಿಸಿದರಂತೆ. ಆಗ ತೇಜಸ್ವಿ ಸೂರ್ಯ ಅವರು ಒತ್ತಾಯ ಮಾಡಿ ತೆಗೆದುಕೊಳ್ಳುವಂತೆ ಹೇಳಿದ ನಂತರ ಕ್ಯಾಶಿಯರ್ ಹಣ ತೆಗೆದುಕೊಂಡರಂತೆ.
ಈ ವೇಳೆ ತೇಜಸ್ವಿ ಸೂರ್ಯ ಅವರು ನಾವು ಬಿಜೆಪಿಯವರು ಎಲ್ಲರನ್ನೂ ಕಾಪಾಡುವ ಎಲ್ಲರನ್ನೂ ಗೌರವಿಸುವ ಪಕ್ಷ, ಡಿಎಂಕೆಯಂತೆ ರೋಲ್ ಕಾಲ್ ಮಾಡುವುದಿಲ್ಲ ಎಂದು ಹೇಳಿದರಂತೆ. ಈ ವಿಷಯವನ್ನು ಅವರು ಟ್ವಿಟ್ಟರ್ ನಲ್ಲಿ ಹಾಕಿದರು.
ಇದಕ್ಕೆ ಅನ್ನಪೂರ್ಣ ಹೊಟೇಲ್ ನ ವ್ಯವಸ್ಥಾಪಕರು ಪ್ರತಿಕ್ರಿಯೆ ನೀಡಿ, ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿಯಿಂದ ಸ್ವಾಗತಿಸುತ್ತೇವೆ. ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಯಾರೂ ನಮ್ಮನ್ನು ಯಾವುದಕ್ಕೂ ಉಚಿತವಾಗಿ ಒತ್ತಾಯಿಸಲಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ಪಡೆದುಕೊಳ್ಳುವುದಿಲ್ಲ ಎಂದು ಹೇಳಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಬಿಜೆಪಿ ಮತ್ತು ಸಂಸದ ತೇಜಸ್ವಿ ಸೂರ್ಯ ವಿರೋಧಿಗಳು ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ತೇಜಸ್ವಿ ಸೂರ್ಯ ಅವರಿಗೆ ಹೊಟೇಲ್ ನವರು ಮುಖಕ್ಕೆ ಹೊಡೆದಂತೆ ತಿರುಗೇಟು ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರೇ ಇದು ತಮಿಳು ನಾಡು, ನಿಮ್ಮ ನಾಟಕವನ್ನೆಲ್ಲಾ ಬೆಂಗಳೂರಿನಲ್ಲಿ ತೋರಿಸಿ ಎಂದು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.